ಹರಪನಹಳ್ಳಿ: ಅಂಬಿಗರ ಚೌಡಯ್ಯ ಅವರು ಕೇವಲ ದೋಣಿ ನಡೆಸುವ ಅಂಬಿಗನಾಗದೆ ಭವವನ್ನು ದಾಟಿಸುವ ನಿಜಶರಣರಾಗಿದ್ದರು ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಹಾಲವರ್ತಿ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ತಿಂಗಳ ಅರಿವಿನ ಬೆಳಕು ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವನಾಗಿ ಹುಟ್ಟಿದ ಮೇಲೆ ಭವ ಮರಣಗಳನ್ನು ದಾಟಿ ಸಾರ್ಥಕ ಬದುಕನ್ನು ನಡೆಸಲು ಅಂಬಿಗರ ಚೌಡಯ್ಯನಂತೆ ನಿಸ್ವಾರ್ಥ ಭಾವದಿಂದ ಕಾಯಕವನ್ನು ಮಾಡಬೇಕು. ನಿಷ್ಠುರವಾದ ನುಡಿಗಳ ಮೂಲಕ ಕ್ರಾಂತಿಕಾರಕ ಶರಣರಾಗಿದ್ದ ಚೌಡಯ್ಯನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದರು.
ಪಿಎಸ್‌ಐ ಶಂಭುಲಿಂಗಯ್ಯ ಎಸ್.ಹಿರೇಮಠ ಮಾತನಾಡಿ, ಒತ್ತಡದ ಬದುಕಿನಲ್ಲಿ ನೆಮ್ಮದಿ, ಶಾಂತಿ ಕಂಡುಕೊಳ್ಳಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಮನಸ್ಸಿಗೆ ಮುದ ಸಿಕ್ಕು ಶರಣರ ವಚನಗಳು ನಿತ್ಯದ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ವಕೀಲ ಮಂಜುನಾಥ ಕಣಿವಿಹಳ್ಳಿ ಮಾತನಾಡಿ, ಗಂಗೆಯ ಮಕ್ಕಳು ನಂಬಿಕೆಗೆ ಅರ್ಹರಾಗಿದ್ದಾರೆ. ಬಸವಣ್ಣನವರ ದೇಶದಲ್ಲಿ ಜನಿಸದೆ ಹೋಗಿದ್ದರೆ, ವರ್ಣಾಶ್ರಮದ ವ್ಯವಸ್ಥೆಯಲ್ಲಿ ತಳಸಮುದಾಯಗಳು ನೆಲೆ ಕಂಡುಕೊಳ್ಳುವುದು ಕಷ್ಟವಾಗುತ್ತಿತ್ತು.ಕಾಯಕದಲ್ಲಿ ನಂಬಿಕೆ ಹೊಂದಿ, ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ್ದರು.
ಸಮಾಜದಲ್ಲಿನ ವಾಸ್ತವಿಕತೆಯನ್ನು ಕಟುವಾಗಿ ತನ್ನ ವಚನದ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದರು. ಅಂಬಿಗ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದೆ ಇದ್ದು ಹಲವಾರು ಉಪಜಾತಿಗಳಿಂದ ಕೂಡಿದೆ, ಕೆಲ ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಸಮುದಾಯದಲ್ಲಿದೆ ಮದ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವರ್ಗ-01 ರಲ್ಲಿದೆ ಆದ್ದರಿಂದ ಮುಖ್ಯವಾಹಿನಿಗೆ ಬರಲು ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಪ್ರಮುಖರಾದ ಪಟ್ಟದಯ್ಯ, ಕೆ.ಎಂ.ಗುರುಸಿದ್ದಯ್ಯ, ಡಾ.ಎ.ಕೆ.ಸಂತೋಷ್, ಹೇಮಣ್ಣ ಮೋರಿಗೆರೆ, ಎಸ್.ಎಂ.ಮಲ್ಲಯ್ಯ, ಎ.ಕರಿಬಸವರಾಜ, ಬಸವರಾಜಪ್ಪ, ಎಸ್.ವೀರಣ್ಣ, ಜಯಲಕ್ಷ್ಮೀ, ರೇಖಾ, ಶೋಭಾ, ಮೌಲಾನಾಸಾಬ್, ಸಿದ್ದಯ್ಯ, ಗುರುಬಸವರಾಜ ಇತರರಿದ್ದರು.