ಬೆಂಗಳೂರು: "ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್' ಕಂಪನಿ ಪೂರೈಸಿರುವ ರಿಂಗರ್ ಲ್ಯಾಕ್ಟೇಟ್ ಗ್ಲೂಕೋಸ್ ಕಳಪೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ರೋಗಿಗಳಿಗೆ ವಿತರಣೆ ಮಾಡದಂತೆ ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮ( ಕೆಎಸ್ಎಂಎಸ್ಸಿಎಲ್) ಸುತ್ತೋಲೆ ಹೊರಡಿಸಿದೆ.
ಕಂಪನಿ ತಯಾರಿಸಿ ಸರಬರಾಜು ಮಾಡಿರುವ ಈ ಔಷಧದ ಎರಡು ಬ್ಯಾಚ್ ಉತ್ತಮ ಗುಣಮಟ್ಟವಲ್ಲವೆಂದು ಔಷಧ ನಿಯಂತ್ರಣ ಇಲಾಖೆ ಘೋಷಿಸಿದೆ. ಹಾಗಾಗಿ, ಟೆಂಡರ್ ನಿಯಮಾನುಸಾರ ಮಾ.22ರಿಂದ ಜಾರಿಗೆ ಬರುವಂತೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಔಷಧದ ಎಲ್ಲ ಬ್ಯಾಚ್ಗಳನ್ನು ಔಷಧ ತಂತ್ರಾಂಶದಲ್ಲಿ ಫ್ರೀಜ್ ಮಾಡಲಾಗಿದೆ. ಆದ್ದರಿಂದ, ಕಂಪನಿಯು ಔಷಧ ಉಗ್ರಾಣಕ್ಕೆ ಸದರಿ ಔಷಧವನ್ನು ಸರಬರಾಜು ಮಾಡಿದರೆ ಕೂಡಲೇ ಅದರ ವಿತರಣೆಯನ್ನು ನಿಲ್ಲಿಸಬೇಕೆಂದು ನಿಗಮ, ಔಷಧ ಉಗ್ರಾಣ ಪ್ರಭಾರಧಾರಕರಿಗೆ ಸೂಚಿಸಿದೆ.ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆರೋಗ್ಯ ಸಂಸ್ಥೆ ವೈದ್ಯಾಧಿಕಾರಿಗಳು ಸರಬರಾಜು ಆಗಿರುವ ಈ ಬ್ಯಾಚ್ನ ಔಷಧಗಳನ್ನು ರೋಗಿಗಳಿಗೆ ನೀಡಬಾರದು. ಬದಲಿಗೆ ಬೇರೆ ಬ್ಯಾಚ್ನ ಉತ್ತಮ ಗುಣಮಟ್ಟದ ಔಷಧ ನೀಡುವಂತೆ ನಿಗಮ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.
2023ರ ಸೆ.5ರಂದು ಕೆಎಸ್ಎಂಎಸ್ಸಿಎಲ್, "ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್' ಕಂಪನಿಗೆ 20 ಕೋಟಿ ರೂ.ಮೌಲ್ಯದ ಗ್ಲೋಕೋಸ್ ಪೂರೈಸುವಂತೆ ಕಾರ್ಯಾದೇಶ ಪತ್ರ ನೀಡಲಾಗಿತ್ತು. ಕೆಲ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೂ ಈ ಕಂಪನಿಗೆ ಗ್ಲೋಕೋಸ್ ಪೂರೈಸಲು ಕಾರ್ಯಾದೇಶ ಪತ್ರ ನೀಡಲಾಗಿತ್ತು. ಔಷಧ ಉಗ್ರಣಗಳಿಗೆ 20 ಕೋಟಿ ರೂ.ಮೌಲ್ಯದ ಐವಿ ್ಲೂಯಿಡ್ಸ್ ಸರಬರಾಜು ಮಾಡಿತ್ತು. ಬಳಿಕ ಕೆಎಸ್ಎಂಎಸ್ಸಿಎಲ್, ಈ ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿತ್ತು. ಈ ವೇಳೆ ವಿವಿಧ ಔಷಧ ಉಗ್ರಣಗಳಲ್ಲಿ ದಾಸ್ತಾನು ಮಾಡಿದ್ದ ಗ್ಲೋಕೋಸ್ ಸ್ಯಾಂಪಲ್ನ್ನು ಔಷಧ ನಿಯಂತ್ರಣ ಇಲಾಖೆ, ಔಷಧಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾಗ ಕಳಪೆ ಎಂಬುದು ಸಾಬೀತಾಗಿತ್ತು. ಕೆಲ ಸರ್ಕಾರಿ ಆಸ್ಪತ್ರೆಗಳಿಗೆ ಈ ಔಷಧ ಪಡೆದಿದ್ದ ರೋಗಿಗಳಿಗೆ ದೇಹ ನಡುಗುವುದು ಸೇರಿ ಇತರೆ ಅಡ್ಡ ಪರಿಣಾಮ ಬೀರಿತ್ತು.