ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯನ್ನು ಅಪಹರಿಸಿ ದೌರ್ಜನ್ಯವೆಸಗಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿ, ಕೊಡಗು ನಿವಾಸಿ, ಪಿ.ಎ ಸಲೀಮ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಮಧ್ಯೆ ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ತೀರ್ಮಾನಿಸಿದ್ದು, ಈತನ ರಕ್ತ ಮತ್ತು ತಲೆಗೂದಲು ಸಂಗ್ರಹಿಸಲು ಹೊಸದುರ್ಗ ಜ್ಯುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಬಾಲಕಿಯ ಮೇಲೆ ದೌಜನ್ಯವೆಸಗಿರುವುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವ ನಿಟ್ಟಿನಲ್ಲಿ ಡಿಎನ್‌ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ. ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಬಿಟ್ಟುಕೊಡುವಂತೆ ಪೊಲೀಸರು ಮೇ 27ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಈ ಮಧ್ಯೆ ಸಾಕ್ಷಿದಾರರು ಆರೋಪಿಯ ಗುರುತು ಪತ್ತೆಹಚ್ಚಿರುವುದಾಗಿ ರಿಮಾಂಡ್ ರಿಪೋರ್ಟ್ ತಿಳಿಸಿದೆ.
ಆರೋಪಿಯನ್ನು ಐದು ದಿವಸಗಳ ಕಾಲ ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಬಾಲಕಿ ಮೈಮೇಲಿದ್ದ ಚಿನ್ನಾಭರಣ ಕಸಿದು ಕೂತುಪರಂಬದ ಜ್ಯುವೆಲ್ಲರಿ ಒಂದಕ್ಕೆ ಮಾರಾಟ ಮಾಡಿದ್ದು, ಇದರಿಂದ ಆರು ಸಾವಿರ ರೂ. ಲಭಿಸಿರುವುದಾಗಿ ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ.