ಜಿಲ್ಲೆ

ಡಿಜೆ ಹಳ್ಳಿ ಗಲಭೆ: ಶಾಸಕರಾದ ರಿಜ್ವಾನ್​, ಜಮೀರ್​ಗೆ ಎನ್​ಐಎ ಡ್ರಿಲ್​

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಶಿವಾಜಿನಗರ ಶಾಸಕ ರಿಜ್ವಾನ್​ ಅರ್ಷದ್​ ಮತ್ತು ಚಾಮರಾಜಪೇಟೆ ಶಾಸಕ ಜಮೀರ್​ ಅಹಮದ್​ ಖಾನ್​ ಅವರು ರಾಷ್ಟ್ರೀಯ ತನಿಖಾ ತಂಡದ(ಎನ್​ಐಎ) ವಿಚಾರಣೆ ಎದುರಿಸಿದ್ದಾರೆ.

ಎನ್​ಐಎ ತನಿಖಾ ಸಂಸ್ಥೆ ಅಧಿಕಾರಿಗಳು ರಿಜ್ವಾನ್​ ಅರ್ಷದ್​ ಹಾಗೂ ಜಮೀರ್​ಗೆ ದೂರವಾಣಿ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದೊಮ್ಮಲೂರಿನಲ್ಲಿರುವ ಎನ್​ಐಎ ಕಚೇರಿಗೆ ಅ.12ರಂದು ರಿಜ್ವಾನ್​ ಅರ್ಷಾದ್​ ಹಾಜರಾದರೆ, ಅ.13ರಂದು ಜಮೀರ್​ ಹಾಜರಾಗಿ ಅಧಿಕಾರಿಗಳಿಗೆ ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.

ಎನ್​ಐಎ ತಂಡ ಕೆಲವು ಪ್ರಶ್ನೆಗಳನ್ನು ಜಮೀರ್​ ಹಾಗೂ ರಿಜ್ವಾನ್​ ಮುಂದಿಟ್ಟಿದ್ದರು. ಗಲಭೆ ನಡೆದ ಬಗ್ಗೆ ನಿಮಗೆ ಮಾಹಿತಿ ತಿಳಿದಿದ್ದು ಹೇಗೆ ? ಗಲಭೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದು ಪೂರ್ವ ನಿಯೋಜಿತ ಅಂತ ನಿಮಗೆ ಅನ್ನಿಸಿದೆಯಾ? ಗಲಭೆ ಹಿಂದೆ ಯಾರೆಲ್ಲ ಇದ್ದಾರೆ ? ಎಂಬಿತ್ಯಾದಿ ಪ್ರಶ್ನೆಗಳನ್ನು ಎನ್​ಐಎ ತಂಡ ಕೇಳಿದೆ. ನಂತರ ಇವರು ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎನ್​ಐಎ, ಸದ್ಯದಲ್ಲೇ ಇನ್ನೂ ಹಲವರನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ಮಾಹಿತಿ ನೀಡಿದ್ದೇವೆ: ಈ ಕುರಿತು 'ವಿಜಯವಾಣಿ' ಜತೆ ಮಾತನಾಡಿದ ಶಾಸಕ ರಿಜ್ವಾನ್​ ಅರ್ಷಾದ್​, ಗಲಭೆ ನಡೆದಾಗ ರಾತ್ರಿ ಏನೆಲ್ಲ ನಡೆದಿದೆ ಎಂಬ ಬಗ್ಗೆ ಎನ್​ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ನನಗೆ ಗೊತ್ತಿರುವ ಮಾಹಿತಿ ನೀಡಿದ್ದೇನೆ. ಜಮೀರ್​ ಅವರಿಂದಲೂ ಮಾಹಿತಿ ಕಲೆ ಹಾಕಿದ್ದಾರೆ. ಮುಂದೆಯೂ ಎನ್​ಐಎ ತನಿಖೆಗೆ ಸಹಕರಿಸುತ್ತೇವೆ. ಗಲಭೆ ವೇಳೆ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದಲೂ ಎನ್​ಐಎ ಮಾಹಿತಿ ಕಲೆ ಹಾಕುವ ಸಾಧ್ಯತೆಗಳಿವೆ ಎಂದರು.

ಗಲಭೆ ವೇಳೆ ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಬಂದು ಗಲಭೆ ನಿಯಂತ್ರಿಸಲು ಸಹಕರಿಸುವಂತೆ ಕೋರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿದ್ದೆವು. ಸ್ವಲ್ಪ ಹೊತ್ತು ಗಲಭೆ ನಿಯಂತ್ರಿಸಲು ಪ್ರಯತ್ನಿಸಿದ್ದೆವು. ಅದಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಆಗಬೇಕು. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಬೇಕು ಎಂದರು.