ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ವಿಶ್ವದ ಮೂರು ಪ್ರಮುಖ ಹಬ್ಬಗಳು ಕ್ರಿಸ್‌ಮಸ್, ರಂಜಾನ್ ಹಾಗೂ ದೀಪಾವಳಿ. ಈ ಪೈಕಿ ದೀಪಾವಳಿ ಸರ್ವಧರ್ಮೀಯರ ಹಬ್ಬವಾಗಿ ಪರಿವರ್ತನೆಗೊಂಡಿದೆ. ಬೆಳಕು ನಿಷ್ಪಕ್ಷಪಾತ. ಎಲ್ಲರ ಅಂತರಂಗದ ಬೆಳಕು ಬೆಳಗಬೇಕು. ಭಾವನೆ, ಜವಾಬ್ದಾರಿಗಳಲ್ಲಿ, ಕರ್ತವ್ಯದಲ್ಲಿ ನಾವು ಬೆಳಗಬೇಕು. ಕರ್ತವ್ಯ ಎಂಬ ಬತ್ತಿ, ಜ್ಞಾನ ಎಂಬ ಎಣ್ಣೆ ಹಾಗೂ ಹಣತೆ ಎಂಬ ಶಿಕ್ಷಣ ಸಂಸ್ಥೆ ಇದ್ದಾಗ ವಿದ್ಯಾರ್ಥಿಗಳ ಬದುಕು ಬೆಳಗಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಗುರುವಾರ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ‘ಆಳ್ವಾಸ್ ದೀಪಾವಳಿ-2024’ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರಂಭದಲ್ಲಿ ಗೋ ಪೂಜೆ ನಡೆಯಿತು. ಅವಲಕ್ಕಿ, ಬೆಲ್ಲ, ಭತ್ತ, ನೀರ್‌ದೋಸೆ, ಬಾಳೆ ಹಣ್ಣು ನೀಡಿ ಗೋವನ್ನು ಸತ್ಕರಿಸಿ, ಆರತಿ ಬೆಳಗಿ ಆರಾಧಿಸಲಾಯಿತು. ಬಳಿಕ ತುಳಸಿ ಪೂಜೆ ನಡೆಯಿತು. ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ ಸಿರಿ ಸಂಪತ್ತು ಸಮೃದ್ಧಿಯನ್ನು ನಾಡಿಗೆ ಹರಸಲಾಯಿತು.
15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪಾಲಕರು, ಸ್ಥಳೀಯರು ಸೇರಿ 20 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿ ಹಬ್ಬ ಆಚರಿಸಲಾಯಿತು. ಕೊಂಬು, ಕಹಳೆ, ಛತ್ರಿ ಚಾಮರದ ಜೊತೆ, ದೇವಕನ್ಯೆಯರು, ದೀಪ, ಕಳಶ ಮೆರವಣಿಗೆ ಮೂಲಕ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ಅತಿಥಿಗಳು ಸಭಾಂಗಣ ಪ್ರವೇಶಿಸಿದರು.
ಶಾಸಕ ಉವಾನಾಥ ಕೋಟ್ಯಾನ್, ಉದ್ಯಮಿ ಕೆ.ಶ್ರೀಪತಿ ಭಟ್, ವಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಚೌಟ, ಐಕಳ ಹರೀಶ್ ಶೆಟ್ಟಿ, ಸಂಗೀತ ನಿರ್ದೇಶಕ ವಿ.ಮನೋಹರ್, ಜಯಶ್ರೀ ಅಮರನಾಥ ಶೆಟ್ಟಿ ಇದ್ದರು. ವೇಣುಗೋಪಾಲ ಶೆಟ್ಟಿ, ನಿತೇಶ್ ವಾರ್ನಾಡು, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಲೀಂದ್ರ ಪೂಜೆ
ತುಳು ಸಂಸ್ಕೃತಿಯಂತೆ ಸರ್ವಪರ್ಣಿಕ ಮರದ ಬಲಿಯೇಂದ್ರ ಕಂಬದ ದೀಪ ಪ್ರಜ್ವಲಿಸುವ ಮೂಲಕ ಡಾ.ಎಂ.ಮೋಹನ ಆಳ್ವ ಅವರು ನಾಡಿನ ಸಮೃದ್ಧಿಗೆ ಪ್ರಾರ್ಥಿಸಿದರು. ತುಳುನಾಡು ಸೇರಿದಂತೆ ಕರಾವಳಿ ನಂಬಿಕೆಯಾದ ಬಲಿಯೇಂದ್ರ ಪೂಜೆ ನಡೆಯಿತು.
ಸಾಂಸ್ಕೃತಿಕ ವೈಭವ, ಸುಡುಮದ್ದು ಪ್ರದರ್ಶನ
ದೀಪಾವಳಿ ಆಚರಣೆ ಭಾಗವಾಗಿ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಮೇಳೈಸಿತು. ಹಲವು ತಂಡಗಳು ನೃತ್ಯ ಪ್ರದರ್ಶನ ನಡೆಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ ಎಲ್ಲರ ಮನಸೋರೆಗೊಂಡಿತು.