ಮೂಡುಬಿದಿರೆ: ಇಂದು ವಿಶ್ವದಾದ್ಯಂತ ಯೋಗ ಅಳವಡಿಸಿಕೊಳ್ಳಲು ಭಾರತ ನಾಯಕತ್ವ ವಹಿಸಿದೆ. ಆರೋಗ್ಯಕರ ಸಮಾಜಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಯೋಗ ಇಂದು ವಿಶ್ವಾದ್ಯಂತ ಮಹತ್ವ ಪಡೆದಿದೆ. ಜೀವನಕ್ಕೆ ಪೂರಕವಾದ ಯೋಗವನ್ನು ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಜರುಗಿದ ವಿದ್ಯಾಭಾರತಿಯ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯೋಗ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದರು.
ಶಾಲಾ ಸಂಚಾಲಕ ಶಾಂತರಾಮ ಕುಡ್ವ ಅಧ್ಯಕ್ಷತೆ ವಹಿಸಿ, ಯೋಗದಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಯೋಜನಗಳಿವೆ. ಯೋಗ ಮಾಡುವುದರಿಂದ ಹಲವಾರು ರೋಗ ನಿವಾರಿಸಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ರಾಜೇಶ ಬಂಗೇರ, ವಿದ್ಯಾಭಾರತಿಯ ಖೇಲ್ ಖೂದ್ ಪ್ರಮುಖ್ ಕರುಣಾಕರ, ಮುಖ್ಯಶಿಕ್ಷಕಿ ವತ್ಸಲಾ ರಾಜೇಶ್ ಉಪಸ್ಥಿತರಿದ್ದರು. ಶಿಕ್ಷಕಿ ಸುಚಿತ್ರಾ ನಿರೂಪಿಸಿದರು.