ಜಿಲ್ಲೆ

ಕಡಬಕ್ಕೆ ಜಿಲ್ಲಾ ನ್ಯಾಯಾಧೀಶ ಭೇಟಿ : ಕೋರ್ಟ್ ನಿರ್ಮಾಣಕ್ಕೆ ಕಾದಿರಿಸಿದ ಸ್ಥಳ ಪರಿಶೀಲನೆ

ಸೌಮ್ಯ ಆರ್

ಕಡಬ: ನ್ಯಾಯಾಲಯ ಸ್ಥಾಪನೆಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ನ್ಯಾಯಾಧೀಶ ಬಸವರಾಜ ಪಾಟೀಲ್ ಕಡಬಕ್ಕೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕಡಬ ಮಿನಿ ವಿಧಾನಸೌಧದ ಹಿಂದುಗಡೆ ಮೂರು ಎಕರೆ ಸ್ಥಳಾವಕಾಶ ಕಾದಿರಿಸಲಾಗಿದ್ದು, ಅಲ್ಲಿಗೆ ಅಗತ್ಯವುಳ್ಳ ರಸ್ತೆ ಹಾಗೂ ಮೂಲಸೌಕರ್ಯ ಕಲ್ಪಿಸುವ ಕುರಿತು ಚರ್ಚಿಸಿದರು.

ಬಳಿಕ ಮಾತನಾಡಿದ ನ್ಯಾಯಾಧೀಶರು, ನ್ಯಾಯಾಲಯ ಪ್ರಾರಂಭಕ್ಕೆ ಹಂತ ಹಂತವಾಗಿ ಕ್ರಮಗಳು ಆಗಬೇಕಾಗಿದೆ. ತಾತ್ಕಾಲಿಕ ನ್ಯಾಯಾಲಯ ಪ್ರಾರಂಭಿಸುವ ಬಗ್ಗೆ ರಾಜ್ಯ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು. ಶ್ರೀವೇ ನ್ಯಾಯಾಲಯ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಕೀಲ ಲೋಕೇಶ್ ಎಂ.ಜೆ. ಕೊಣಾಜೆ ಸ್ವಾಗತಿಸಿದರು. ಶಿವಪ್ರಸಾದ್ ಪುತ್ತಿಲ, ಕೃಷ್ಣಪ್ಪ ಗೌಡ ಕಕ್ವೆ, ನಾರಾಯಣ ಗೌಡ, ಪಥ್ವಿ, ಜ್ಞಾನೇಶ ಬಾಬು, ಚೇತನಾ, ಸುಮನಾ ಎಂ., ಮಹಮ್ಮದ್ ರಮೀಜ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಫಜಲ್ ಕೋಡಿಂಬಾಳ, ಉಪತಹಸೀಲ್ದಾರ್‌ಗಳಾದ ಸಾಯುದುಲ್ಲಾ ಖಾನ್, ಗೋಪಾಲ್ ಕೆ. ಮತ್ತಿತರರು ಉಪಸ್ಥಿತರಿದ್ದರು.

ತಾತ್ಕಾಲಿಕ ನ್ಯಾಯಾಲಯಕ್ಕೆ ಮನವಿ

ಕಡಬ ತಾಲೂಕಾದರೂ ಇಲ್ಲಿನ ಜನರು ಪುತ್ತೂರು ನ್ಯಾಯಾಲಯವನ್ನೇ ಆಶ್ರಯಿಸುತ್ತಿದ್ದು, ಕಡಬದಿಂದ ಪುತ್ತೂರು 60 ಕಿ.ಮೀ ದೂರದಲ್ಲಿದೆ. ಶಾಶ್ವತ ನ್ಯಾಯಾಲಯ ನಿರ್ಮಾಣಗೊಳ್ಳುವವರೆಗೆ ತಾತ್ಕಾಲಿಕ ನ್ಯಾಯಾಲಯ ನಿರ್ಮಿಸಬೇಕೆಂದು ಸ್ಥಳೀಯ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ನ್ಯಾಯಾಧೀಶರು ತಾತ್ಕಾಲಿಕ ನ್ಯಾಯಾಲಯ ಸ್ಥಾಪನೆಗಾಗಿ ಸ್ಥಳೀಯ ಎಪಿಎಂಸಿ ಕಟ್ಟಡದ ಮಹಡಿ ಹಾಲ್ ಪರಿಶೀಲಿಸಿದರು.