ಗುರುಪುರ: ಶಕ್ತಿಯ ವಿಕೇಂದ್ರೀಕರಣಕ್ಕೆ ಪಂಚಾಯಿತಿ ವ್ಯವಸ್ಥೆ ಇದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆ ತಲುಪಬೇಕೆಂಬ ನಿಟ್ಟನಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆ ರೂಪಿಸಲಾಗಿದೆ. ಹಳ್ಳಿಯ ಮೂಲೆಯಲ್ಲಿರುವವರಿಗೆ ಪಂಚಾಯಿತಿ ಮೂಲಕ ಉತ್ತಮ ಸೇವೆ ಒದಗಿಸುವುದು ಸದಸ್ಯರ ಕರ್ತವ್ಯವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಪಡುಪೆರಾರ ಗ್ರಾಪಂನಲ್ಲಿ ಬುಧವಾರ ಆಯೋಜಿಸಿದ ಆಟೋ ರಿಕ್ಷಾ ಪಾರ್ಕ್ ಉದ್ಘಾಟನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಶ್ರೇಯೋಭಿವೃದ್ಧಿ ಅನುದಾನದಡಿ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಕುಡಿಯುವ ನೀರಿನ ಸಿಂಟೆಕ್ಸ್ ವಿತರಣೆ, ವಿಶೇಷ ಚೇತನರ ಸಹಾಯಧನ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯ ಜನಾರ್ದನ ಗೌಡ ಮಾತನಾಡಿ, ಪಡುಪೆರಾರ ಗ್ರಾ.ಪಂ. ಆರ್ಥಿಕವಾಗಿ ಸದೃಢವಾಗಿದೆ ಎಂಬುದಕ್ಕೆ ವರ್ಷಾಂತ್ಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ನಿದರ್ಶನ. ಭೌಗೋಳಿಕವಾಗಿ ಎಲ್ಲ ಅವಕಾಶ ಹೊಂದಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಾಮೂಹಿಕ ಚಿಂತನೆ ನಡೆಸಬೇಕೆಂದರು.
ಬಜ್ಪೆ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶಂಕರನಾಗ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಇಲ್ಲಿನ ಪಂಚಾಯಿತಿ ಪ್ರತಿನಿಧಿಗಳು ಸರ್ಕಾರಿ ವೈದ್ಯರು, ಸಿಬ್ಬಂದಿಗೆ ಜತೆ ಉತ್ತಮ ಸಹಕಾರ ನೀಡಿದ್ದಾರೆ. ಇಂತಹ ಸಹಕಾರ-ಒಗ್ಗಟ್ಟು ಪ್ರತಿಯೊಂದು ಉತ್ತಮ ಕೆಲಸಗಳಲ್ಲಿರಬೇಕು ಎಂದು ಆಶಿಸಿದರು.
ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಉಗ್ಗಪ್ಪ ಮೂಲ್ಯ ವಿಕಲಚೇತನರ ಸಹಾಯಧನ ಚೆಕ್ ಪಟ್ಟಿ ಓದಿದರು. ಒಟ್ಟು 13 ಮಂದಿ ಎಸ್‌ಸಿ, ಎಸ್‌ಟಿ ಕುಟುಂಬಕ್ಕೆ ನೀರಿನ ಟ್ಯಾಂಕ್ ವಿತರಿಸಲಾಯಿತು. ರಾಮಣ್ಣ ಪೂಜಾರಿ ಕುಕ್ಕಟ್ಟೆ ಅವರಿಗೆ ಕೃತಕ ಕಾಲು ವಿತರಿಸಲಾಯಿತು.
ಪಂಚಾಯಿತಿ ಜಯಂತ ಪೂಜಾರಿ, ಪಡುಪೆರಾರ ಶ್ರೀ ಬ್ರಹ್ಮ ಬಲವಾಂಡಿ ದೈವಸ್ಥಾನದ ಬಲವಾಂಡಿ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ ಮೊದಲಾದವರಿದ್ದರು. ಪಂಚಾಯಿತಿ ಸದಸ್ಯ ಯಶವಂತ ಪೂಜಾರಿ ಸ್ವಾಗತಿಸಿದರು. ನವೀನ್ ಕುಮಾರ್ ಪೆರಾರ ನಿರೂಪಿಸಿದರು. ಪಂಚಾಯಿತಿ ಲೆಕ್ಕ ಸಹಾಯಕ ನಾಗೇಶ್ ವಂದಿಸಿದರು.
ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಕಿಟ್ ವಿತರಣೆ
ಮೂಡುಪೆರಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಸಿಎಫ್‌ನ ಸಿಎಸ್‌ಆರ್ ಅನುದಾನದಡಿ ಒದಗಿಸಲಾದ ಇಸಿಜಿ ಉಪಕರಣ, ಇತರ ಕೆಲವು ಮಹತ್ವದ ವೈದ್ಯಕೀಯ ಸೊತ್ತನ್ನು ಎಂ ಸಿಎಫ್ ಅಧಿಕಾರಿಗಳು ಪಂಚಾಯಿತಿ ಮೂಲಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿದರು. ಎಂಸಿಎಫ್ ಅಧಿಕಾರಿಗಳಾದ ಎಸ್.ಗಿರೀಶ್, ಚೇತನ್ ಮೆಂಡೋನ್ಸ, ಡಾ.ಯೋಗೇಶ್, ಅವಿನಂದ್, ವೈದ್ಯಾಧಿಕಾರಿ ಡಾ.ಶಂಕರ್‌ನಾಗ್ ಮತ್ತಿತರರಿದ್ದರು.