ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ನೀಡಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವ ಪರಿಣಾಮ ಕೆಲ ವರ್ಷಗಳಿಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದು ಸಂತಸ ತಂದಿದೆ ಎಂದು ಅದಾನಿ ಸಮೂಹ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಪಡುಬಿದ್ರಿ ಬಂಟರ ಭವನ ಹೊರಾಂಗಣದಲ್ಲಿ ಗುರುವಾರ ಅದಾನಿ ಫೌಂಡೇಶನ್ ಸಿಎಸ್‌ಆರ್ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಿದ್ಯುತ್ ಸ್ಥಾವರ ಅದಾನಿ ಸಮೂಹಕ್ಕೆ ಸೇರಿ 9 ವರ್ಷಗಳಾಗಿದ್ದು, ಸತತವಾಗಿ 9 ವರ್ಷಗಳಿಂದ ಬೃಹತ್ ಪ್ರಮಾಣದಲ್ಲಿ ಸ್ಥಾವರದ ಆಸುಪಾಸಿನ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪರಿಕರ ಸಿಎಸ್‌ಆರ್ ಯೋಜನಯಡಿ ಒದಗಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 60 ಲಕ್ಷ ರೂ. ಮೊತ್ತದ ಶಿಕ್ಷಣ ಪರಿಕರ ಸ್ಥಾವರದ ಆಸುಪಾಸಿನ ಸರ್ಕಾರಿ ಹಾಗೂ ಅನುದಾನಿತ ಸೇರಿ 76 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6800 ವಿದ್ಯಾರ್ಥಿಗಳಿಗೆ ವಿತರಿಸುತ್ತಿದೆ ಎಂದರು.
ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾಪು ತಾಲೂಕು ಯುವಜನ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಪಡುಬಿದ್ರಿ ಗಾಪಂ ಅಧ್ಯಕ್ಷೆ ಶಶಿಕಲಾ ವೈ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಎ.ಮೆಂಡನ್, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ ಮೆಂಡನ್, ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ದಿವಾಕರ್ ಪೂಂಜಾ, ಕುತ್ಯಾರು ಗ್ರಾಪಂ ಅಧಕ್ಷ ಜನಾರ್ದನ ಆಚಾರ್ಯ, ಮುದರಂಗಡಿ ಗ್ರಾಪಂ ಅಧ್ಯಕ್ಷೆ ನಮಿತಾ, ತೆಂಕ ಗ್ರಾಪಂ ಅಧ್ಯಕ್ಷೆ ಸುರೇಖ, ಎಲ್ಲೂರು ಗ್ರಾಪಂ ಉಪಾಧ್ಯಕ್ಷೆ ಉಷಾ, ಬೆಳ್ಮಣ್ಣು ಗ್ರಾಪಂ ಅಧ್ಯಕ್ಷೆ ರಾಮೇಶ್ವರಿ ಶೆಟ್ಟಿ ಅದಾನಿ ಫೌಂಡೇಶನ್ ಅನುದೀಪ್, ಧೀರಜ್, ಶುಭಮಂಗಳ ಉಪಸ್ಥಿತರಿದ್ದರು. ಅದಾನಿ ಸಮೂಹದ ಅಸೋಸಿಯೇಟ್ ಜನರಲ್ ಮ್ಯಾನೇಜರ್ ರವಿ ಆರ್ ಜೇರೆ ಸ್ವಾಗತಿಸಿದರು. ಶಿಕ್ಷಕ ಸುಧಾಕರ ಶೆಣೈ ಪಿಲಾರು ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಅದಾನಿ ಫೌಂಡೇಶನ್ ಹಲವಾರು ಯೋಜನೆ ರೂಪಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಹ ಅದಾನಿ ಸಿಎಸ್‌ಆರ್ ಒಂದು ವರದಾನವಾಗಿದೆ. ಮುಂಬರುವ ದಿನಗಳಲ್ಲಿ ಅದಾನಿ ಸಮೂಹ ಶಿಕ್ಷಣ ಪರಿಕರಗಳ ವಿತರಣೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಬೇಕು.-ದೇವಿಪ್ರಸಾದ್ ಶೆಟ್ಟಿ ಬೆಳಪು ಗ್ರಾಪಂ ಅಧ್ಯಕ್ಷ https://www.vijayavani.net/coastal-youth-group