ಸುಬ್ರಹ್ಮಣ್ಯ: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪವಿತ್ರ ಗ್ರಂಥಗಳ ಜ್ಞಾನ ಅತ್ಯಗತ್ಯ. ಗ್ರಂಥದಲ್ಲಿನ ವಿಚಾರಗಳು ಬದುಕಿನ ಔನತ್ಯಕ್ಕೆ ದಾರಿದೀಪವಾಗಹುದು ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್.ಹೇಳಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಗೆ ಬುಧವಾರ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಭಗವದ್ಗೀತೆ ಗ್ರಂಥ ವಿತರಿಸಿ ಮಾತನಾಡಿದರು.
ಪ್ರೌಢಶಾಲೆಯ 223 ವಿದ್ಯಾರ್ಥಿಗಳಿಗೆ ಗ್ರಂಥ ವಿತರಿಸಲಾಯಿತು. ರೋಟರಿ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್. ಮತ್ತು ನಿರ್ದೇಶಕ ಗಿರೀಶ್ ಗ್ರಂಥಗಳನ್ನು ಕೊಡುಗೆ ನೀಡಿದ್ದರು. ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಂದಾ ಹರೀಶ್, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಸಂಸ್ಕೃತ ಅಧ್ಯಾಪಕ ರಘು ಬಿಜೂರು, ಉಪನ್ಯಾಸಕ ಮತ್ತು ರೋಟರಿ ನಿರ್ದೇಶಕ ಗಿರೀಶ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.