ಹರಿಪ್ರಸಾದ್ ನಂದಳಿಕೆ ಕಾರ್ಕಳ
ಹಲವು ದಿನಗಳಿಂದ ನಿರಂತರವಾಗಿ ಸುರಿದ ಮೃಗಶಿರ, ಪುಷ್ಯಾ ನಕ್ಷತ್ರದ ಮಳೆಯಿಂದಾಗಿ ಮಲ್ಲಿಗೆ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಗಿಡಗಳ ಬುಡದಲ್ಲಿ ನೀರು ನಿಂತು ಎಲೆಗಳು ಉದುರಿ, ಬುಡವೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದ್ದು ಮಲ್ಲಿಗೆ ಕೃಷಿಕರು ಸಂಪೂರ್ಣ ಕಂಗಾಲಾಗಿದ್ದಾರೆ.
ಉಡುಪಿ ಜಿಲ್ಲೆಯ ಶಂಕರಪುರವನ್ನು ಕೇಂದ್ರವಾಗಿರಿಸಿಕೊಂಡು ಕಟಪಾಡಿ, ಶಿರ್ವ, ಮೂಡುಬೆಳ್ಳೆ, ಮುದರಂಗಡಿ, ಬೆಳ್ಮಣ್ ಪರಿಸರದಲ್ಲಿ ಮಲ್ಲಿಗೆ ಕೃಷಿ ನಂಬಿಕೊಂಡು ಜೀವನ ಕಳೆಯುತ್ತಿರುವ ಕುಟುಂಬಗಳು ಇದೀಗ ಸಂಕಟ ಅನುಭವಿಸುತ್ತಿದ್ದಾರೆ.
ಮಳೆ ನೀರಿನಿಂದ ಮಲ್ಲಿಗೆ ಗಿಡಗಳಿಗೆ ತೊಂದರೆಯಾದರೆ ಇದೀಗ ಬಿಸಿಲು ಬೀಳುತ್ತಿದ್ದಂತೆ ಕೀಟಭಾದೆಯೂ ಆರಂಭಗೊಂಡಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ನಡುವೆ ಗಿಡಗಳ ಚಿಗುರು ಕೀಟ ಸೇವಿಸಿ ಗಿಡಗಳ ಬೆಳವಣಿಗೆ ಹಾಗೂ ಇಳುವರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಕೆಲವೊಂದು ಗಿಡಗಳಲ್ಲಿ ಹೂವುಗಳು ಇದ್ದರೂ ಕೀಟದ ಸಮಸ್ಯೆಯಿಂದ ಹಾಳಾಗುತ್ತಿದೆ. ಹೀಗಾಗಿ ಇಳುವರಿಗೆ ಕುಠಿತಗೊಂಡಿದೆ.
ಪ್ರತಿ ಬಾರಿ ಮಳೆಗಾಲದ ಸಂದರ್ಭ ಗಿಡಗಳ ಎಲೆ ಉದುರಿ ಒಂದಷ್ಟು ಗಿಡಗಳು ಕೊಳೆತು ಹೋಗುವುದು ಸಾಮಾನ್ಯ. ಪ್ರತಿ ವರ್ಷಗಳಂತೆ ಈ ಬಾರಿಯೂ ಕೃಷಿಕರು ಮಳೆಗಾಲ ಸಮೀಪಿಸುತ್ತಿದ್ದಂತೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೂ, ನಿರೀಕ್ಷೆಗೂ ಮೀರಿ ಮಳೆ ಬಂದುದರಿಂದ ಸಂಕಷ್ಟ ಎದುರಾಗಿದೆ. ಮಲ್ಲಿಗೆ ತೋಟದಲ್ಲಿ ಹುಲ್ಲು ಬೆಳೆಯದಂತೆ ನೆಲಕ್ಕೆ ಪ್ಲಾಸ್ಟಿಕ್ ಹಾಸು ಅಳವಡಿಸಿದ್ದು ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದಾಗಿಯೂ ನಿರಂತರ ಮಳೆಗೆ ಗಿಡಗಳು ಸೊರಗಿವೆ.
ಗಿಡಗಳು ಕೊಳೆತ ಪರಿಣಾಮ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿಯಾಗಿದ್ದು, ಮಾರುಕಟ್ಟೆಯಲ್ಲಿ ಮಾತ್ರ ಬೇಡಿಕೆ ಹೆಚ್ಚಾಗಿದೆ. ಸರಣಿ ಹಬ್ಬಗಳು, ವ್ರತ, ಪೂಜೆ ಪುನಸ್ಕಾರಗಳು, ಶ್ರದ್ಧಾಕೇಂದ್ರಗಳಲ್ಲಿ ವಿಶೇಷ ಸೇವೆಗಳು ಪ್ರಾರಂಭವಾಗಿದ್ದು, ಸಿಂಹ ಮಾಸ (ಸೋಣ ತಿಂಗಳು) ದೇವಿ ದೇವಸ್ಥಾನಗಳಲ್ಲಿ ಆರಾಧನೆಗಳು ಆರಂಭಗೊಂಡು ಭಕ್ತರು ಹೆಚ್ಚಾಗಿ ಮಲ್ಲಿಗೆಯನ್ನು ಕ್ಷೇತ್ರಗಳಿಗೆ ಅರ್ಪಿಸುವುದು ಸಾಮಾನ್ಯ. ಹೀಗಾಗಿ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವಿಗೆ ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಆ.14ರಂದು 2100 ರೂ.ಯ ಗರಿಷ್ಠ ದರ ನಿಗದಿಯಾಗಿದ್ದು, ಬಳಿಕ ಆ.15ರಂದು ಕೊಂಚ ದರದಲ್ಲಿ ಇಳಿಕೆ ಕಂಡು 1700 ರೂ. ನಿಗದಿಯಾಗಿತ್ತು. ಆ.16 ಹಾಗೂ ಆ.17ರಂದು ಮತ್ತೆ 2100 ರೂ. ಗರಿಷ್ಠ ಮೊತ್ತ ನಿಗದಿಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಇದು ಸುಮಾರು 2500ರಿಂದ 3000 ಸಾವಿರ ರೂ. ವರೆಗೆ ಮಾರಾಟವಾಗಿದೆ.
ಮಲ್ಲಿಗೆ ಕೃಷಿಯೂ ಒಂದು ಆರ್ಥಿಕ ಬೆಳೆಯಾಗಿದ್ದು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹುತೇಕ ಕುಟುಂಬಗಳು ಜೀವನಕ್ಕಾಗಿ ಮಲ್ಲಿಗೆ ಕೃಷಿಯನ್ನೇ ಅವಲಂಭಿಸಿವೆ. ಹವಾಮಾನ ವೈಪರಿತ್ಯ, ಪ್ರಕೃತಿ ವಿಕೋಪಕ್ಕೆ ಬೆಳೆ ನಾಶವಾದಲ್ಲಿ ಸರ್ಕಾರದಿಂದ ಸ್ಪಲ್ಪ ಮಟ್ಟಿನ ಪರಿಹಾರ ನೀಡಿ ಪ್ರೋತ್ಸಾಹಿಸುವ ಅಗತ್ಯ ಇದೆ.-ನಿತ್ಯಾನಂದ ನಾಯಕ್ ಮಲ್ಲಿಗೆ ಕೃಷಿಕರು ಪಾಲಮೆ
ಯಾವುದೇ ಕಾರಣಕ್ಕೂ ಮಲ್ಲಿಗೆ ಗಿಡದ ಸುತ್ತಮುತ್ತ ಇರುವ ಹುಲ್ಲನ್ನು ಕೀಳಬಾರದು. ಮಣ್ಣನ್ನು ಅಗೆಯಬಾರದು. ಹವಾಮಾನ ವೈಪರಿತ್ಯ, ವಿಪರೀತ ಮಳೆಯಿಂದ ಎಲೆಗಳು ಉದುರಿದ ಗಿಡಗಳಿಗೆ ಒಂದೆರಡು ಗಂಟೆ ಬಿಸಿಲು ಬಿದ್ದ ಸಂದರ್ಭ ಶಿಲೀಂಧ್ರ ನಾಶಕ (ಬೋರ್ಡೋ ದ್ರಾವಣ.) ಸಿಂಪಡಿಸಬೇಕು. ಒಂದೆರಡು ದಿನ ಮಳೆ ಬಾರದಿದ್ದಲ್ಲಿ ಪ್ರತಿ ಗಿಡಗಳಿಗೂ ಅತ್ಯಂತ ದ್ರವರೂಪದಲ್ಲಿ ಗೊಬ್ಬರ ನೀರು, ಅಥವಾ ನೆಲಗಡಲೆ ಹಿಂಡಿ ನೀರು ಅಲ್ಪ ಪ್ರಮಾಣದಲ್ಲಿ ಕೊಡಬೇಕು. ಇದರಿಂದ ಗಿಡಗಳು ಚೇತರಿಸಿಕೊಳ್ಳುತ್ತವೆ.-ಬಂಟಕಲ್ಲು ರಾಮಕೃಷ್ಣ ಶರ್ಮ ಮಲ್ಲಿಗೆ ಕೃಷಿ ಸಂಪನ್ಮೂಲ ವ್ಯಕ್ತಿ