ಕೆ.ಸಂಜೀವ ಆರ್ಡಿ
ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಹಾಲಾಡಿಯಿಂದ ಗೋಳಿಯಂಗಡಿ, ಬೆಳ್ವೆ, ಅಲ್ಬಾಡಿ ಮೂಲಕ ಕಾರ್ಕಳಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಖಾಸಗಿ ಗುತ್ತಿಗೆ ಸಂಸ್ಥೆಯೊಂದು ರಸ್ತೆಗೆ ಹೊಂದಿಕೊಂಡು ಭಾರಿ ಗಾತ್ರದ ಪೈಪ್ ಹಾಕಿ ಬೇಕಾಬಿಟ್ಟಿ ಕಾಮಗಾರಿಯಿಂದ ಪ್ರತಿ ನಿತ್ಯ ಜನರು ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ತಿಂಗಳ ಹಿಂದೆ ಪೈಪ್ ಹಾಕಲಾದ ಸ್ಥಳದಲ್ಲಿ ಮಣ್ಣು ಕುಸಿದು ಕಣಿವೆ, ಹೊಂಡ ಗುಂಡಿ ಉಂಟಾಗಿದೆ. ರಸ್ತೆ ಬದಿ ಮಣ್ಣಿನ ರಾಶಿಯಿಂದ ಕೆಸರು ಮಣ್ಣು ತುಂಬಿ ಗದ್ದೆಯಂತಾಗಿದೆ.
ಪೈಪ್ ಹಾಕಲಾದ ರಸ್ತೆ ಭಾಗದಲ್ಲಿ ಮಳೆಗಾಲದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ಇಲ್ಲದೆ ಸಣ್ಣಮಳೆಗೂ ರಸ್ತೆ ಮೇಲೆ ಹರಿದು ನೀರು ಹೊಳೆಯಾಗುತ್ತಿದೆ. ಬೆಳ್ವೆಯಲ್ಲಂತೂ ಮದಗದ ಬಳಿ ತಿರುವಿನಲ್ಲಿ ಅಸಮರ್ಪಕ ಚರಂಡಿಯಿಂದ ರಸ್ತೆ ಮೇಲೆ ನೀರು ಉಕ್ಕಿ ಹರಿದು ಹೊಳೆಯಾಗುತ್ತಿದೆ.
ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯಿಂದ ಒಳ ಭಾಗದ ಊರಿಗೆ ಹೋಗುವ ಸ್ಥಳದಲ್ಲಿ ಬೇಕಾ ಬಿಟ್ಟಿಯಾಗಿ ರಸ್ತೆ ಅಗೆದಿದ್ದು, ಪೈಪ್ ಹಾಕಿದ ಪರಿಣಾಮ ಮಣ್ಣು ಕುಸಿದು ಬೈಕ್, ರಿಕ್ಷಾ, ವಾಹನ ಹೂತು ಹೋಗುತ್ತಿವೆ. ರಸ್ತೆ ದಾಟಿ ಶಾಲೆಗೆ ಹೋಗುವ ಮಕ್ಕಳು ನಡೆದು ಹೋಗಲು ಭಯ ಪಡುತ್ತಿದ್ದಾರೆ. ವಾಹನ ಸವಾರರು, ಪಾದಚಾರಿಗಳು ತಿರುಗಾಡಲು ಹರ ಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಸಂಸ್ಥೆಯ ಬೇಜವಬ್ದಾರಿ ಕಾಮಗಾರಿಗೆ ಇಲ್ಲಿನ ಜನರು ಹಿಡಿಶಾಪ ಹಾಕುವಂತಾಗಿದೆ. ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ನೀರಿನ ಪೈಪ್ ಹಾಕಿದ ಸ್ಥಳದಲ್ಲಿ ಇತ್ತೀಚೆಗೆ ಬಂದ ಮಳೆಗೆ ಮಣ್ಣು ಕುಸಿದು ದೊಡ್ಡ ಕಣಿವೆ ನಿರ್ಮಾಣವಾಗಿದೆ. ಶಾಲೆ ಬಳಿ ರಾಜ್ಯ ಹೆದ್ದಾರಿಯಿಂದ ಗುಡ್ಡೆಮನೆ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಮನೆಗಳಿಗೆ ಹೋಗುವ ಸಂಪರ್ಕ ಡಾಂಬರು ರಸ್ತೆ ಅಗೆದು ಜನ ಸಮಸ್ಯೆಗೊಳಗಾಗಿದ್ದಾರೆ.
ಇಲ್ಲಿನ ಮುಖ್ಯ ರಸ್ತೆಗೆ ಬಂದ ಖಾಲಿ ಗೂಡ್ಸ್ ವಾಹನ ಕೆಸರಿನ ಹೊಂಡದಲ್ಲಿ ಹೂತು ಸಮಸ್ಯೆಯಾಗಿದೆ. ಅಲ್ಬಾಡಿಯಲ್ಲಿ 4 ವರ್ಷಗಳ ಹಿಂದೆ ದೂರವಾಣಿ ಇಲಾಖೆ ಕೇಬಲ್, ನೀರಿನ ಪೈಪ್ ಹಾಕಿದ ಸ್ಥಳದಲ್ಲಿ ಮಣ್ಣು ಕುಸಿದು ಹತ್ತಾರು ಜಾನುವಾರು ಬಿದ್ದು ಮೃತಪಟ್ಟಿವೆ. ಸರಕು ತುಂಬಿದ ವಾಹನ ಆಳದ ಕಣಿವೆಯಲ್ಲಿ ಹೂತು ಮಗುಚಿ ಬೀಳುವ ಹಂತಕ್ಕೆ ತಲುಪಿದ್ದು, ಸ್ಥಳೀಯರು ಸಂಭವಿಸಬಹುದಾದ ಭಾರಿ ಅವಘಡ ತಪ್ಪಿಸಿದ್ದಾರೆ. ಬಾಡಿಗೆ ವಾಹನದವರು ಮುಖ್ಯ ರಸ್ತೆ ದಾಟಿ ಒಳ ಭಾಗದ ಊರುಗಳಿಗೆ ಬರಲು ಹಿಂಜರಿಯುತ್ತಿದ್ದಾರೆ.
ನಿತ್ಯ ಸಮಸ್ಯೆ ಸಂಭವಿಸುತ್ತಿದ್ದರೂ ಗುತ್ತಿಗೆ ಸಂಸ್ಥೆಯವರು ಕೆಲವು ದಿನಗಳ ಬಳಿಕ ಕಾಟಚಾರಕ್ಕೆ ಎಂಬಂತೆ ಅಲ್ಲಲ್ಲಿ ಚರಂಡಿ ರಿಪೇರಿ, ಜಲ್ಲಿ ಸುರಿದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಅಸರ್ಪಕ ಕಾಮಗಾರಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಂದಿನ ಕಾಮಗಾರಿಗೆ ತಡೆಯೊಡ್ಡುವುದಾಗಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ನೀರಿನ ಯೋಜನೆಗೆ ಖಾಸಗಿ ಗುತ್ತಿಗೆ ಸಂಸ್ಥೆಯ ಬೇಕಾಬಿಟ್ಟಿ ಕಾಮಗಾರಿಯಿಂದ ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಭಾಗದಲ್ಲಿ ಜನರಿಗೆ ಸಂಚಾರ ಸಮಸ್ಯೆಯಾಗುತ್ತಿದೆ. ಗುತ್ತಿಗೆದಾರರು ಮಳೆಗಾಲಕ್ಕೆ ಮುಂಚಿತವಾಗಿ ಪೈಪ್ ಹಾಕಿದ ಸ್ಥಳದಲ್ಲಿ ಯಾವುದೇ ಮುಂಜಾಗ್ರತೆ ವಹಿಸದಿರುವುದರಿಂದ ಇಲ್ಲಿನ ಜನರು, ವಾಹನ ಸವಾರರು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಪ್ರತಿ ನಿತ್ಯ ತೊಂದರೆ ಪಡುವಂತಾಗಿದೆ. ಗುತ್ತಿಗೆದಾರರು ಇಲ್ಲಿನ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಅಗತ್ಯವಿದೆ.-ಗಣೇಶ್ ಅರಸಮ್ಮಕಾನು, ಸಾಮಾಜಿಕ ಕಾರ್ಯಕರ್ತ
ಗೋಳಿಯಂಗಡಿ, ಬೆಳ್ವೆ, ಅಲ್ಬಾಡಿಯಲ್ಲಿ ಕಾರ್ಕಳಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಹಾಕಿದ ಪೈಪ್‌ಲೈನ್ ಸ್ಥಳದಲ್ಲಿ ಮಳೆಗಾಲದಲ್ಲಿ ಮಣ್ಣು ಕುಸಿದಿರುವುದು ಹಾಗೂ ಇತರ ಸಮಸ್ಯೆ ಬಗ್ಗೆ ಜನರಿಂದ ದೂರು ಬಂದಿವೆ. ಸದ್ಯಕ್ಕೆ ಜಲ್ಲಿ, ವೇಟ್‌ಮಿಕ್ಸ್ ಹಾಕಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಚರಂಡಿಯಲ್ಲಿ ನೀರು ಹರಿಯಲು ವ್ಯವಸ್ಥೆ ಮಾಡಲಾಗುವುದು. ಮಳೆಗಾಲದ ಬಳಿಕ ಇಲ್ಲಿನ ಸಮಸ್ಯೆಗಳಿಗೆ ಪರಿಹಾರವಾಗುವಂತೆ ಕಾಮಗಾರಿ ನಡೆಸಲಾತ್ತದೆ.ಅನಿಲ್, ಜೂನಿಯರ್ ಇಂಜಿನೀಯರ್, ಖಾಸಗಿ ಗುತ್ತಿಗೆ ಸಂಸ್ಥೆ
ಪೈಪ್‌ಲೈನ್ ಸ್ಥಳದಲ್ಲಿ ಇತ್ತೀಚೆಗೆ ಬಂದಿರುವ ಭಾರಿ ಮಳೆಯಿಂದ ರಸ್ತೆ ಭಾಗದಲ್ಲಿ ಮಣ್ಣು ಕುಸಿದು ಹಾಗೂ ಚರಂಡಿಯಲ್ಲಿ ನೀರು ಹರಿಯದಿರುವ ಬಗ್ಗೆ ಜನರಿಂದ ದೂರು ಬಂದಿವೆ. ಪೈಪ್‌ಲೈನ್ ಹಾಕಲು ಗುತ್ತಿಗೆ ಪಡೆದ ಸಂಸ್ಥೆಯವರಲ್ಲಿ ಸಮಸ್ಯೆಗಳಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.ರಾಮು, ಜೂನಿಯರ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ