ಜಿಲ್ಲೆ

ಮಹಾಬಲೇಶ್ವರ ಮಂದಿರದಲ್ಲಿ ಉಪಾಧಿ ಸಂಬಂಧ ವಿವಾದ

Uttara Kannada - Subash Hegde

ಗೋಕರ್ಣ:ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದ ನಂದಿ ಗೃಹದಲ್ಲಿ ನಿತ್ಯ ನಡೆಸಲಾಗುವ ವಿವಿಧ ಉಪಾಧಿ ಹಕ್ಕಿನ ಸಂಬಂಧ ವಿವಾದ ಉಂಟಾದ ಹಿನ್ನೆಲೆಯಲ್ಲಿ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ,ಕುಮಟಾ ಉಪವಿಭಾಗೀಯಾಧಿಕಾರಿ ಕಲ್ಯಾಣಿ ಕಾಂಬ್ಳೆ ನೇತೃತ್ವದಲ್ಲಿ ಇದಕ್ಕೆ ಸಂಬAಧಿಸಿದ ಉಪಾಧಿವಂತರ ತ್ವರಿತ ಸಭೆ ಗುರುವಾರ ನಡೆಯಿತು.
ಹಿನ್ನೆಲೆ:ಶ್ರೀಮಹಾಬಲೇಶ್ವರ ಮಂದಿರದಲ್ಲಿನ ನಂದಿ ಗೃಹದಲ್ಲಿ ಭಕ್ತರಿಗೆ ತೀರ್ಥ ಪ್ರಸಾದವನ್ನು ನೀಡುವ ಉಪಾಧಿವಂತ ಹಕ್ಕು ಇಲ್ಲಿನ ಜಂಭೆ ಭಟ್ಟರ ಮನೆತನ ಮತ್ತು ಗೋಪಿ ಭಟ್ಟರ ಕುಟುಂಬಗಳಿಗೆ ಪರಂಪರೆಯಿಂದ ದತ್ತವಾಗಿದೆ.ಈ ಪೈಕಿ ಗೋಪಿ ಭಟ್ಟರ ಕುಟುಂಬದ ವಾರ್ಷಿಕ ಉಪಾಧಿಯ ಪಾಳಿ ವೈಶಾಖ ಶುದ್ಧ ಪ್ರತಿಪದೆಯಿಂದ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಗುರುವಾರ ಈ ಕುಟುಂಬದವರು ತಮ್ಮ ಉಪಾಧಿ ನಿರ್ವಹಣೆಗಾಗಿ ಮಂದಿರಕ್ಕೆ ಆಗಮಿಸಿದಾಗ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಇನ್ನೊಂದು ಉಪಾಧಿವಂತರಿಂದ ಅವಕಾಶ ನಿರಾಕರಿಸಲಾಯಿತು.ಇದನ್ನು ವಿರೋಧಿಸಿ ನಂದಿ ಗೃಹದಲ್ಲಿಯೇ ಅನೇಕರು ಪ್ರತಿಭಟನೆ ನಡೆಸಿ ಧರಣಿಗೆ ಕೂಡ ಕುಳಿತ ಹಿನ್ನೆಲೆಯಲ್ಲಿ ಕೆಲ ಸಮಯ ವಾತಾವರಣ ತ್ವೇಷಮಯವಾಯಿತು.ಈ ವೇಳೆ ಮಂದಿರದಲ್ಲಿ ಹಾಜರಿದ್ದ ಪೊಲೀಸ್ ಇನಸ್ಪೆಕ್ಟರ್ ಯೋಗೇಶ ಮತ್ತು ಇತರ ಅಧಿಕಾರಿಗಳು ಮಂದಿರದ ಸಮಿತಿ ಕಾರ್ಯದರ್ಶಿಗಳಾದ ಉಪವಿಭಾಗೀಯಾಧಿಕಾರಿಗಳು ಆಗಮಿಸುವ ವರೆಗೆ ಶಾಂತತೆ ಕಾಪಾಡುವಂತೆ ತಿಳಿಸಿ ವಾತಾವರಣವನ್ನು ತಿಳಿಗೊಳಿಸಿದರು.

ತ್ವರಿತ ಸಭೆ:

ಚುನಾವಣೆಯ ಕರ್ತವ್ಯದ ನಡುವೆಯೂ ಮಂದಿರಕ್ಕೆ ತಕ್ಷಣ ಆಗಮಿಸಿದ ಕುಮಟಾ ಉಪವಿಭಾಗೀಯಾಧಿಕಾರಿ ಕಲ್ಯಾಣಿ ಕಾಂಬ್ಳೆ ಉಪಾಧಿವಂತ ಹಕ್ಕು ಪಡೆದ ಉಭಯ ಪಂಗಡಗಳ ಅಭಿಪ್ರಾಯ ಪಡೆದು ಅವರವರ ಉಪಾಧಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನೀಡಲು ಆದೇಶಿಸಿದರು.ಈ ವೇಳೆ ಗೋಪಿ ಮನೆತನದ ವತಿಯಿಂದ ಶಂಕರ ಫಣಿರಾಜ ಗೋಪಿ ಮತ್ತಿತರರು ಈ ಕುರಿತಾದ ದಾಖಲೆಗಳನ್ನು ಕೊಟ್ಟು ಕ್ಷೇತ್ರ ಪದ್ಧತಿಯಂತೆ ತಮಗೆ ಉಪಾಧಿ ನಿರ್ವಹಣೆಗೆ ಅವಕಾಶ ಒದಗಿಸಲು ವಿನಂತಿಸಿದರು.ಆದರೆ ಜಂಭೆ ಮನೆತನದ ವತಿಯಿಂದ ಹಾಲಿ ಉಪಾಧಿ ನಿರ್ವಹಣೆಗೆ ಮುಂದಾಗಿರುವ ಗಣೇಶ ಪರಮೇಶ್ವರ ಜಂಭೆ ಮತ್ತಿತರರು ಕಾಗದ ಪತ್ರವನ್ನು ಒದಗಿಸಲು ಕಾಲಾವಕಾಶ ಕೇಳಿಕೊಂಡರು.
ಮಾರಾಟಕ್ಕೆ ವಿರೋಧ:ಸಭೆಯಲ್ಲಿ ನಂದಿ ಗೃಹದಲ್ಲಿ ಯಾವುದೇ ಆದೇಶವಿಲ್ಲದೆಯೆ ತೀರ್ಥ ನೀಡುವವರು ಪ್ರಸಾದದ ಪ್ಯಾಕೆಟ್‌ಗಳನ್ನು ಹಣಕ್ಕೆ ಮಾರಾಟ ಮಾಡುತ್ತಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದು ಇವುಗಳನ್ನು ನಿರ್ಬಂಧಿಸಲು ಆಗ್ರಹಿಸಲಾಯಿತು.

ಉಪವಿಭಾಗೀಯಾಧಿಕಾರಿಗಳ ಹೇಳಿಕೆ:

ಸಭೆಯ ತರುವಾಯ ಮಾಧ್ಯಮದವರಿಗೆ ಹೇಳಿಕೆ ನೀಡಿದ ಉಪವಿಭಾಗೀಯಾಧಿಕಾರಿ ಕಲ್ಯಾಣಿ ಕಾಂಬ್ಳೆ ಮಂದಿರದ ಆಡಳಿತ ಕುರಿತಾಗಿ ತಾವೊಬ್ಬರೇ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಿಲ್ಲ.ನಂದಿ ಗೃಹ ಉಪಾಧಿ ಸಂಬAಧಿತ ವಿವಾದವನ್ನು ಸಮಿತಿಯ ಅಧ್ಯಕ್ಷರ ಗಮನಕ್ಕೆ ತರಲಾಗುವುದು.ಈ ವಿವಾದಕ್ಕೆ ಸಂಬಂಧಿಸಿ ನೀಡಲಾದ ದಾಖಲೆಗಳನ್ನು ಪರಿಶೀಲಿಸಲಾಗುವುದು. ಜತೆಗೆ ಕಾಗದ ಪತ್ರ ಒದಗಿಸಲು ಇನ್ನೋರ್ವ ಉಪಾಧಿವಂತರು ಕಾಲಾವಕಾಶ ಕೋರಿದ್ದಾರೆ.ಇವುಗಳನ್ನು ಗಮನವಿರಿಸಿ ಒಂದು ವಾರದೊಳಗೆ ಈ ಬಗ್ಗೆ ಯುಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.ಆತನಕ ನಂದಿ ಗೃಹದಲ್ಲಿ ಪ್ರಸಾದ ಮಾರಾಟ ಮಾಡದೆ ಯಥಾ ಸ್ಥಿತಿ ಕಾಪಾಡುವಂತೆ ಆದೇಶಿಸಿದರು.ಸಭೆಯಲ್ಲಿ ಮಂದಿರ ಸಮಿತಿಯ ವೇ.ಪರಮೇಶ್ವರ ಮಾರ್ಕಾಂಡೆ,ದತ್ತಾತ್ರೇಯ ಹಿರೇಗಂಗೆ ಮತ್ತಿತರರಿದ್ದರು.