ಸಂಡೂರು ತಾಲೂಕಿನ ತೋರಣಗಲ್ ಗ್ರಾಪಂ ಆವರಣದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರು ಯು.ಭೂಪತಿ ಅವರ ಭಾವಚಿತ್ರ ಹಾಗೂ ಕೊಟ್ಟಿಗೆ ಕರಿಬಸಮ್ಮ ಅವರ ‘ಭಾವಬೆಳಗು’ ಕವನ ಸಂಕಲನ ಬಿಡುಗಡೆ ಮಾಡಿದರು. ಗ್ರಾಪಂ ಅಧ್ಯಕ್ಷ ಅಳ್ಳಾಪುರದ ವೀರೇಶಪ್ಪ, ಟ್ರಸ್ಟ್ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಜಿ.ಏಕಾಂಬ್ರಪ್ಪ ಇತರರಿದ್ದರು. 
ಜಿಲ್ಲೆ

ಕಾರ್ಮಿಕರ ಪರವಾದ ವಿಷಯಗಳ ಚರ್ಚೆ

ಸಂಡೂರು: ವಿಜಯನಗರ ಉಕ್ಕು ನಮ್ಮ ಹಕ್ಕು ಎನ್ನುವ ಹೋರಾಟದಿಂದ ಮಾಜಿ ಶಾಸಕ ಯು.ಭೂಪತಿ ಕಾರ್ಮಿಕರ ಹಾಗೂ ಶೋಷಿತರ ಧ್ವನಿಯಾಗಿದ್ದರು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.

ತಾಲೂಕಿನ ತೋರಣಗಲ್ ಗ್ರಾಪಂ ಆವರಣದಲ್ಲಿ ಯು.ಭೂಪತಿ ಸ್ಮಾರಕ ಟ್ರಸ್ಟ್‌ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಭಾವಚಿತ್ರ ಅನಾವರಣ ಹಾಗೂ ಕೊಟ್ಟಿಗೆ ಕರಿಬಸಮ್ಮ ಅವರ ಭಾವಬೆಳಗು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

1985ರಲ್ಲಿ ರಾಜಕೀಯ ಪಲ್ಲಟಗಳಾದಾಗ 25ನೇ ವಯಸ್ಸಿನಲ್ಲಿ ಸಂಡೂರಿನ ಶಾಸಕರಾಗಿ ವಿಧಾನಸಭೆಯಲ್ಲಿ ಕಾರ್ಮಿಕರ ಪರವಾಗಿ ಹಲವಾರು ವಿಚಾರಗಳನ್ನು ಚರ್ಚಿಸಿದ್ದರು. ಸಚಿವ ಸಂತೋಷ್ ಲಾಡ್, ಈ.ತುಕಾರಾಮ್ ಸೇರಿ ಅನೇಕ ರಾಜಕಾರಣಿಗಳಿಗೆ ಗುರು ಆಗಿದ್ದರು. ಶಿಕ್ಷಕಿ ಕೊಟ್ಟಿಗೆ ಕರಿಬಸಮ್ಮ ಅವರ ಭಾವಬೆಳಗು ಕವನ ಸಂಕಲನದಲ್ಲಿ ಅರ್ಥಪೂರ್ಣ ಕವಿತೆಗಳಿದ್ದು, ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಕವಿಯಿತ್ರಿಯಾಗಿ ಬೆಳೆಯಲಿ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರಪ್ಪ ಮಾತನಾಡಿ, ಭಾವಬೆಳಗು ಕೃತಿ ಜ್ಞಾನ, ಸ್ತ್ರೀ-ಸಂವೇದನೆ, ಕನ್ನಡ ನಾಡು-ನುಡಿ ಹೀಗೆ ಹಲವು ವಸ್ತುವಿಷಯಗಳನ್ನು ಒಳಗೊಂಡಿದೆ. ಕವಿಮನದ ಭಾವನೆಗಳಿಗೆ ಅಕ್ಷರ ರೂಪ ನೀಡಿ ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಕೃತಿಯನ್ನು ಕರಿಬಸಮ್ಮನೀಡಿದ್ದಾರೆ ಎಂದರು.

ಯು.ಭೂಪತಿ ಟ್ರಸ್ಟ್ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಭೂಪತಿ ಅವರ ಚಿಂತನೆಗಳು, ಹೋರಾಟದ ಮನೋಭಾವ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಟ್ರಸ್ಟ್ ಸ್ಥಾಪಿಸಲಾಗಿದೆ. ಅವರು ಪುಸ್ತಕ ಓದಿ ಹೊಸ ವಿಚಾರಗಳನ್ನು ಸದನದಲ್ಲಿ ನಿಖರವಾಗಿ ಮಾತನಾಡುತ್ತಿದ್ದರು. ಕವಿಗೋಷ್ಠಿ, ವಿಚಾರಸಂಕಿರಣ, ಪುಸ್ತಕ ಬಿಡುಗಡೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು ಎಂದರು.

ಬಿಇಒ ಡಾ. ಐ.ಆರ್.ಅಕ್ಕಿ, ಚಳ್ಳಕೆರೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಶರಣಪ್ಪ, ಗ್ರಾಪಂ ಉಪಾಧ್ಯಕ್ಷೆ ನಿಂಗಮ್ಮ, ಪ್ರಮುಖರಾದ ಮಲ್ಲಿಕಾರ್ಜುನ ಗೌಡ, ಅಭಿಮನ್ಯು ಭೂಪತಿ, ಪಂಪಾಪತಿ ಇತರರಿದ್ದರು.