ಗುರುಪುರ: ಘನ ವಾಹನ ನಿಷೇಧಿಸಲಾಗಿರುವ ಪೊಳಲಿ-ಅಡ್ಡೂರು ಹಳೆ ಸೇತುವೆಗೆ ಪರ್ಯಾಯವಾಗಿ ಫಲ್ಗುಣಿ ನದಿಗೆ ಅಡ್ಡಲಾಗಿ ಬಂಡು ಅಳವಡಿಸಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಅವಕಾಶ ಮಾಡಿ ಕೊಡುವ ಸಾಧ್ಯತೆಗಳ ಬಗ್ಗೆ ಮಂಗಳೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಹೇಮಂತ ಕುಮಾರ್ ಸೋಮವಾರ ಪೊಳಲಿ ಸೇತುವೆ ಸುತ್ತಲ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು.
ನದಿಗೆ ಅಡ್ಡಲಾಗಿ ಸೇತುವೆ ಎರಡೂ ಪಾರ್ಶ್ವದಲ್ಲಿ ರಸ್ತೆ ನಿರ್ಮಿಸಲು ಅವಕಾಶವಿದೆ. ಇಂತಹ 2 ಅವಕಾಶಗಳಲ್ಲಿ ಒಂದರ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದರು. ಆದರೆ, ಈ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದರು.
ಪಿಡಬ್ಲ್ಯೂಡಿ ಅಧಿಕಾರಿಯೊಂದಿಗಿನ ಚರ್ಚೆ ವೇಳೆ ಸಮಿತಿ ಅಧ್ಯಕ್ಷ ವೆಂಕಟೇಶ ನಾವಡ, ಉಪಾಧ್ಯಕ್ಷರಾದ ಜಯರಾಮಕೃಷ್ಣ, ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ, ಪ್ರಸಾದ್ ಗರೋಡಿ, ಯು. ಪಿ. ಇಬ್ರಾಹಿಂ, ಅಬೂಬಕ್ಕರ್ ಅಮ್ಮುಂಜೆ, ಬಶೀರ್ ಗಾಣೆಮಾರು, ಯಶವಂತ ಪೊಳಲಿ, ಲೋಕೇಶ್ ಭರಣಿ, ಚಂದ್ರಶೇಖರ ಭಟ್, ಕಿಶೋರ್ ಪಲ್ಲಿಪಾಡಿ, ಎ. ಕೆ. ಅಶ್ರಫ್, ಗೋಪಾಲ ಬಂಗೇರ, ಉಮೇಶ್ ಆಚಾರ್ಯ, ರಫೀಕ್ ಅಡ್ಡೂರು ಮತ್ತಿತರರು ಇದ್ದರು.
ಪಿಡಬ್ಲ್ಯೂಡಿ ಅಧಿಕಾರಿ ಭೇಟಿ ನೀಡಿದ ಬಳಿಕ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹರೀಶ್ ಕುಮಾರ್ ಇತ್ತಿತರರು ಪೊಳಲಿ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿದರು. ಪೊಳಲಿಯಲ್ಲಿ ಪರ್ಯಾಯ ರಸ್ತೆಯ ಬಗ್ಗೆ ಅಧಿಕಾರಿ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿ, ಅ. 15ರಂದು ನಡೆಸಬೇಕಿದ್ದ ಪ್ರತಿಭಟನೆ ಕೈಬಿಡುವಂತೆ ಸಮಿತಿಯಲ್ಲಿ ಮನವಿ ಮಾಡಿದರು.
ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿದ ಬಳಿಕ ಸಾರ್ವಜನಿಕ ಸೇವೆಯ ವಾಹನಗಳ ಸಹಿತ ಎಲ್ಲರಿಗೂ ಸಮಸ್ಯೆ ಉಂಟಾಗಿದೆ. ಜಿಲ್ಲಾಡಳಿತದ ಗಮನ ಸೆಳೆಯುವ ದೃಷ್ಟಿಯಿಂದ ಸ್ಥಳೀಯವಾಗಿ ರಚಿಸಲಾದ ಫಲ್ಗುಣಿ ಸೇತುವೆ ಹೋರಾಟ ಸಮಿತಿಯು ಸಂಘ-ಸಂಸ್ಥೆಗಳು ಮತ್ತು ನಾಗರಿಕರ ಬೆಂಬಲದೊಂದಿಗೆ ಅ. 15ರಂದು ಸೇತುವೆ ಸಂಚಾರ ಬಂದ್ ಪ್ರತಿಭಟನೆ ನಿರ್ಧರಿಸಿತ್ತು. ಈ ಮಧ್ಯೆ, ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಸೂಚನೆಯಂತೆ ಸೋಮವಾರ ಪೊಳಲಿಗೆ ಭೇಟಿ ನೀಡಿದ ಪಿಡಬ್ಲ್ಯೂಡಿ ಅಧಿಕಾರಿಯವರು ನದಿಯಲ್ಲಿ ಮಣ್ಣಿನ ರಸ್ತೆ ಮಾಡುವ ಕುರಿತು ಸಮಿತಿ ಜತೆ ಚರ್ಚಿಸಿದರು. ಸದ್ಯಕ್ಕೆ ಅವರಿಂದ ಸಮಾಧಾನಕರ ಉತ್ತರ ಸಿಕ್ಕಿರುವ ಹಿನ್ನೆಲೆಯಲ್ಲಿ ಸಮಿತಿಯು ಅ. 15ರ ಪೊಳಲಿ-ಅಡ್ಡೂರು ಸೇತುವೆ ಸಂಚಾರ ಬಂದ್ ಪ್ರತಿಭಟನೆ ಹಿಂತೆಗೆದುಕೊಂಡಿದೆ.