ಜಿಲ್ಲೆ

ಡೀಸೆಲ್​ ಟ್ಯಾಂಕರ್ ಪಲ್ಟಿ; ಇಂಧನ ತುಂಬಿಕೊಳ್ಳಲು ಜನರ ನೂಕುನುಗ್ಗಲು..

ವಿಜಯಪುರ: ಬ್ರೇಕ್ ಫೇಲ್ ಆದ ಪರಿಣಾಮ ಡೀಸೆಲ್ ಟ್ಯಾಂಕರ್​ವೊಂದು ಪಲ್ಟಿಯಾಗಿದ್ದು, ಬಿಟ್ಟಿಯಾಗಿ ಸಿಗುತ್ತಿರುವ ಡೀಸೆಲ್​ ತುಂಬಿಕೊಂಡು ಹೋಗಲು ಜನರು ಮುಗಿಬಿದ್ದ ಪ್ರಸಂಗವೂ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

ವಿಜಯಪುರ ಹೊರವಲಯದ ರಂಭಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಡೀಸೆಲ್​ ಟ್ಯಾಂಕರ್ ಬ್ರೇಕ್ ಫೇಲ್ ಆಗಿ ಪಲ್ಟಿಯಾಗಿದೆ. ಪರಿಣಾಮವಾಗಿ, ಅದರಿಂದ ಡೀಸೆಲ್ ಸೋರಲಾರಂಭಿಸಿದ್ದು, ಸ್ಥಳೀಯರು ಮತ್ತು ದಾರಿಹೋಕರು ಸಿಕ್ಕಷ್ಟು ಡೀಸೆಲ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದರು.

ಸ್ಥಳಕ್ಕೆ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಹಾಗೂ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಜನರನ್ನು ಚದುರಿಸಲು ಹರಸಾಹಸಪಟ್ಟರು. ಈ ಟ್ಯಾಂಕರ್​ ಕಲಬುರಗಿಯಿಂದ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣಕ್ಕೆ ಹೊರಟಿತ್ತು.