ಜಿಲ್ಲೆ

ಮಾನಹಾನಿಕರವಾಗಿ ವರ್ತಿಸುವವರ ವಿರುದ್ಧ ಪ್ರತಿಭಟನೆ : ಧರ್ಮಸ್ಥಳ ಕ್ಷೇತ್ರ ಅಭಿಮಾನಿಗಳ ಸಮಾಲೋಚನಾ ಸಭೆಯಲ್ಲಿ ನಿರ್ಣಯ

ಸೌಮ್ಯ ಆರ್

ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಾಗೂ ಅಭಿಮಾನಿಗಳ ಸಮಾಲೋಚನಾ ಸಭೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

ಭಕ್ತರು ಹಾಗೂ ಗಣ್ಯರ ಸಲಹೆ ಸೂಚನೆಗಳನ್ನು ಪಡೆದು, ಚರ್ಚಿಸಿ, ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಮಾನಹಾನಿಕರವಾಗಿ ವರ್ತಿಸುವವರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಸಿರಿಬಾಗಿಲು ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೊಡಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಜಿಲ್ಲಾ ಐಕ್ಯವೇದಿ ಜಿಲ್ಲಾಧ್ಯಕ್ಷ ಎಸ್.ಪಿ.ಶಾಜಿ, ವಿಹಿಂಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ, ಅಖಿಲೇಶ್ ನಗುಮುಗಂ, ರಾವೇಂದ್ರ ಬದಿಯಡ್ಕ, ಕಿರಣ್ ಪ್ರಸಾದ್ ಕೂಡ್ಲು ಮೊದಲಾದವರಿದ್ದರು.

ಸಭೆಯಲ್ಲಿ 25 ಸದಸ್ಯರ ಅಡ್‌ಹಾಕ್ ಸಮಿತಿಯನ್ನು ರಚಿಸಲಾಗಿದ್ದು, ಶ್ರೀ ರಾಜನ್ ಮುಳಿಯಾರ್ ಅವರನ್ನು ಸಂಯೋಜಕರಾಗಿ ಹಾಗೂ ಗಣೇಶ್ ಮಾವಿನಕಟ್ಟೆ ಅವರನ್ನು ಸಹ ಸಂಯೋಜಕರಾಗಿ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಮಹತ್ತರ ಪ್ರತಿಭಟನೆಗಳಿಗೆ ನೇತೃತ್ವ ನೀಡುವ ನಿಟ್ಟಿನಲ್ಲಿ 1001 ಮಂದಿ ಸದಸ್ಯರ ಪ್ರತಿಭಟನಾ ಸಮಿತಿ ರಚಿಸಿ, ಕಾಸರಗೋಡು ನಗರದಿಂದ ಉಳಿಯತ್ತಡ್ಕವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ಸೆಪ್ಟೆಂಬರ್ 8ರಂದು ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮುಂದಾಳತ್ವದಲ್ಲಿ ಶ್ರೀಮಠದಿಂದ ಧರ್ಮಸ್ಥಳದವರೆಗೆ ಹಮ್ಮಿಕೊಳ್ಳುವ ವಾಹನ ಜಾಥಾ ‘ಚಲೋ ಧರ್ಮಸ್ಥಳ’ ಕಾರ್ಯಕ್ರಮಕ್ಕೆ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಗದೀಶ ಕೂಡ್ಲು ಸ್ವಾಗತಿಸಿದರು. ಹಿಂದು ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ವಂದಿಸಿದರು.