ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಸಲಾದ ಷಡ್ಯಂತ್ರದ ಬಗ್ಗೆ ತೇಜಸ್ ಗೌಡ ಮತ್ತು ಇತರರು ವಿಶೇಷ ತನಿಖಾ ದಳಕ್ಕೆ ನೀಡಿರುವ ದೂರಿಗೆ ಸಂಬಂಧಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಪರಿಗಣಿಸಿದ ನ್ಯಾಯಾಲಯ ಎಸ್‌ಐಟಿ, ಇಡಿ ಮತ್ತು ಆದಾಯ ತೆರಿಗೆ ಸೇರಿದಂತೆ 7 ಪ್ರತಿವಾದಿಗಳಿಗೆ ದೂರಿಗೆ ಸಂಬಂಧಿಸಿ ನಡೆದ ತನಿಖಾ ವರದಿ ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿದೆ.
ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯಾ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದು, ಹೋರಾಟಕ್ಕೆ ವಕೀಲರಿಗೆ ಲಕ್ಷಾಂತರ ರೂ. ಖರ್ಚಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಜತೆಗೆ ಹೋರಾಟದಲ್ಲಿ ತೊಡಗಿಸಿಕೊಂಡ ಸೌಜನ್ಯಾ ತಾಯಿ ಸೇರಿದಂತೆ ಪ್ರತಿಯೊಬ್ಬರೂ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ ಖರೀದಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ಬೇಕಾದ ಸಂಪನ್ಮೂಲಗಳನ್ನು ಮಹೇಶ್ ಶೆಟ್ಟಿ ಮತ್ತು ಇತರರು ಎಲ್ಲಿಂದ ಹೊಂದಿಸಿಕೊಂಡರು ಎಂಬ ಬಗ್ಗೆ ತನಿಖೆ ಮಾಡಬೇಕು ಎಂದು ತೇಜಸ್ ಗೌಡ ದೂರಿನಲ್ಲಿ ಎಸ್‌ಐಟಿಯನ್ನು ಕೋರಿದ್ದರು.
ಇನ್ನೊಬ್ಬ ಅರ್ಜಿದಾರ ಧನಕೀರ್ತಿ ಎಂಬುವರು, ಕುಡ್ಲ ರಂಪೇಜ್ ಎಂಬ ಯೂಟ್ಯೂಬರ್ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದರಲ್ಲದೆ, ಎಸ್‌ಐಟಿ ತನಿಖೆ ಸಂದರ್ಭ ದಿನನಿತ್ಯ ವರದಿ ಪ್ರಸಾರ ಮಾಡುತ್ತಿದ್ದರು. ಅವರು ಯಾವ ಮೂಲದಿಂದ ಮಾಹಿತಿ ಪಡೆದಿದ್ದರು ಎಂದು ತಿಳಿಸುವಂತೆ ಎಸ್‌ಐಟಿಯನ್ನು ಕೋರಿದ್ದರು. ಅಲ್ಲದೆ ವಿಠಲ ಗೌಡ ಎಂಬುವರು ಹಿಂದೆ ಹೋಟೆಲ್ ನಡೆಸುತ್ತಿದ್ದಾಗ ಕಾರ್ಮಿಕನೊಬ್ಬನನ್ನು ಕೊಲೆ ಮಾಡಿದ್ದು, ಆ ಕೇಸನ್ನು ಮುಚ್ಚಿ ಹಾಕಲಾಗಿದೆ. ಅದಕ್ಕೆ ಸಂಬಂಧಿಸಿದ ಕೆಲದಾಖಲಾತಿಗಳನ್ನು ಎಸ್‌ಐಟಿಗೆ ಸಲ್ಲಿಸಿದ್ದು, ಅದರ ಬಗ್ಗೆ ಎಸ್‌ಐಟಿ ಕೂಲಂಕಷವಾಗಿ ತನಿಖೆ ಮಾಡಬೇಕೆಂದು ಕೋರಿದ್ದರು.
ಈ ಎಲ್ಲ ವಿಷಯಗಳಿಗೆ ಸಂಬಂಧಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ 7 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದೆ.