ಚೌಟರ ಅರಮನೆ ಮುಂಭಾಗ ಅಬ್ಬಕ್ಕ ಪ್ರತಿಮೆ : ಜವನೆರ್ ಬೆದ್ರ ಸಂಘಟನೆ ಕೊಡುಗೆ : ಮೂಡುಬಿದಿರೆಯಲ್ಲಿ ರಾಣಿಯ ನೆನಪಿಗೆ ನಿರ್ಮಾಣ

New Project (11)
Published on

ಯಶೋಧರ ವಿ.ಬಂಗೇರ ಮೂಡುಬಿದಿರೆ ಚೌಟರ ರಾಣಿ ಅಬ್ಬಕ್ಕಳ 500ನೇ ಜನ್ಮಮಹೋತ್ಸವ ಆಚರಣೆ ನಡೆಯುತ್ತಿದ್ದು, ಮೂಡುಬಿದಿರೆಯ ಯುವ ಸಂಘಟನೆ ಜವನೆರ್ ಬೆದ್ರ ಚೌಟರ ಅರಮನೆಯ ಮುಂಭಾಗದಲ್ಲೇ ರಾಣಿ ಅಬ್ಬಕ್ಕಳ ಬೃಹತ್ ಪ್ರತಿಮೆ ನಿರ್ಮಿಸಿ ಪ್ರತಿಷ್ಠಾಪಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಜವನೆರ್ ಬೆದ್ರ ‘ಸ್ವಚ್ಛ ಮೂಡುಬಿದಿರೆ’ ಪರಿಕಲ್ಪನೆಯಡಿ ಕ್ಲೀನ್ ಅಪ್ ಮೂಡುಬಿದಿರೆ ಅಭಿಯಾನ ನಿರಂತರವಾಗಿ ನಡೆಸಿದ್ದು, 100ನೇ ವಾರದ ನೆನಪಿಗಾಗಿ ಚೌಟರ ಅರಮನೆಯ ಎದುರು ಕಿರು ಉದ್ಯಾನವನ ಸ್ಥಾಪಿಸಿತ್ತು. ಅಲ್ಲಿ ಕಿರು ಪ್ರತಿಮೆ ನಿರ್ಮಿಸಲಾಗಿತ್ತು. ರಾಣಿ ಅಬ್ಬಕ್ಕಳ 500ನೇ ಜನ್ಮ ಮಹೋತ್ಸವ ಸವಿನೆನಪಿಗಾಗಿ ಸಂಘಟನೆ ಆರೂವರೆ ಫೀಟ್ ಉದ್ದದ ಪ್ರತಿಮೆಯನ್ನು ಕಿರು ಪ್ರತಿಮೆ ಇರುವ ಸ್ಥಳದಲ್ಲೇ ಪ್ರತಿಷ್ಠಾಪಿಸಿದೆ. ಮುಂದೆ ಇದರ ಎದುರು ಇರುವ ಉದ್ಯಾನವನ ಅಭಿವೃದ್ಧಿಪಡಿಸಿ, ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತದೆ. ಚೌಟರ ಅರಮನೆ ಮನೆತನದ ಕುಲದೀಪ ಎಂ. ಅವರ ಮಾರ್ಗದರ್ಶನದಲ್ಲಿ ಕೆಲಸಗಳು ನಡೆಯುತ್ತಿವೆ.ಬೆಂಗಳೂರಿನಲ್ಲಿರುವ ಚೌಟರ ರಾಣಿ ಅಬ್ಬಕ್ಕನ ಪುತ್ಥಳಿಯನ್ನೇ ನಿಂತ ಭಂಗಿಯಲ್ಲಿ ಈ ಪ್ರತಿಮೆ ಹೋಲುತ್ತದೆ. ಕಾಸರಗೋಡು ಕುಂಬಳೆಯ ಶಿಲ್ಪಿ ವೇಣುಗೋಪಾಲ್ ಪ್ರತಿಮೆ ನಿರ್ಮಿಸಿದ್ದಾರೆ. ಪುತ್ತಿಗೆ ಕ್ಷೇತ್ರದಲ್ಲಿ ಪ್ರಾರ್ಥನೆ: ಚೌಟರ ಅರಮನೆಯ ಮುಂಭಾಗದಲ್ಲಿ ಸ್ಥಾಪಿಸಿದ ರಾಣಿ ಅಬ್ಬಕ ಕಿರು ಉದ್ಯಾನವನದ ಪುನಃನಿರ್ಮಾಣದ ಸಲುವಾಗಿ ಚೌಟರ ಮನೆತನದ ಆಡಳಿತದಲ್ಲಿರುವ ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಜವನೆರ್ ಬೆದ್ರ ಸಂಘಟನೆ ಭಾನುವಾರ ಪೂಜೆ ಸಲ್ಲಿಸಿ, ಚೌಟರ ಅರಮನೆಯಲ್ಲಿರುವ ಪಟ್ಟದ ಮಂಚ ಮುಂಭಾಗದಲ್ಲಿ ಚೌಟರ ಅರಮನೆಯ ಪ್ರತಿನಿಧಿ ಕುಲದೀಪ್ ಎಂ. ಅವರಿಗೆ ಫಲ ಪುಷ್ಪ ಸಮರ್ಪಿಸಿದರು. ಹಳೆಯ ಸಣ್ಣ ವಿಗ್ರಹವನ್ನು ತೆಗೆದು ರಾಣಿ ಅಬ್ಬಕ್ಕ ದೇವಿಯ ನೂತನ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಯಿತು. ಟ್ರಸ್ಟಿನ ಅಧ್ಯಕ್ಷ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿ ರಂಜಿತ್ ಶೆಟ್ಟಿ, ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಸಂದೀಪ್ ಕೆಲಪುತ್ತಿಗೆ, ಪ್ರತಿಷ್, ಸುಮಂತ್ ಶೆಟ್ಟಿ, ಶಮಿತ್ ರಾವ್, ಶಾಂತಾ, ರಾಧಾ, ಸುನಿತಾ, ಲಕ್ಷ್ಮೀ ಭಟ್ ಸಹಿತ ಸದಸ್ಯರು ಭಾಗವಹಿಸಿದರು. ತಾಲೂಕಿನಲ್ಲಿ ಎರಡನೇ ಬೃಹತ್ ಪುತ್ಥಳಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ರಾಣಿ ಅಬ್ಬಕ್ಕ ದೇವಿಯ ಬೃಹತ್ ಪುತ್ಥಳಿಯನ್ನು 2019ರಲ್ಲಿ ಶಾಸಕ ಉಮಾನಾಥ ಎ.ಕೋಟ್ಯಾನ್ ಮುತುವರ್ಜಿಯಲ್ಲಿ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗಿತ್ತು. ಹಿಂದೆ ಜವನೆರ್ ಬೆದ್ರ ಕಿರು ಪ್ರತಿಮೆ ಸ್ಥಾಪಿಸಿದ್ದರೂ ಈಗ ಸ್ಥಾಪನೆಯಾಗಿರುವ ಪ್ರತಿಮೆ ತಾಲೂಕಿನ ಎರಡನೇ ಬೃಹತ್ ಪ್ರತಿಮೆಯಾಗಿದೆ.

ಚೌಟರ ಅರಮನೆಯ ಸಹಕಾರದೊಂದಿಗೆ, ಮೂಡುಬಿದಿರೆಯ ದಾನಿಗಳ ನೆರವಿನೊಂದಿಗೆ ನಮ್ಮ ಸಂಘಟನೆ ಯೋಜನೆ ಕೈಗೆತ್ತಿಕೊಂಡಿದೆ. ಮುಂದಿನ ದಿನಗಳಲ್ಲಿ ಅಬ್ಬಕ್ಕನ ಹೆಸರಿನಲ್ಲಿ ಇನ್ನಷ್ಟು ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದೇವೆ. ಇದು ಪ್ರವಾಸಿ ಆಕರ್ಷಣೆಯ ತಾಣವಾಗಬೇಕೆಂಬ ಇಚ್ಛೆ ನಮ್ಮದು. ಅಮರ್ ಕೋಟೆ ಸಂಸ್ಥಾಪಕ, ಜವನೆರ್ ಬೆದ್ರ ಫೌಂಡೇಷನ್ https://www.vijayavani.net/ramanjaneya-trophy-tug-of-war https://www.vijayavani.net/hindi-day-at-new-vibrant-college

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net