ಬೆಂಗಳೂರು: ಹಗಲಿನಲ್ಲಿ ಸೂರ್ಯ, ಇರುಳಿನಲ್ಲಿ ಚಂದ್ರನು ಬೆಳಕು ನೀಡುವಂತೆ ಸದಾ ಕಾಲ ಮನುಷ್ಯನು ನಡೆದು ಹೋಗುವ ದಾರಿಯಲ್ಲಿ ಬೆಳಕು ನೀಡುವುದು ಧರ್ಮ ಎಂದು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ.
ನಗರದ ಐತಿಹಾಸಿಕ ತಿಂಡ್ಲು ಶ್ರೀವೀರಭದ್ರೇಶ್ವರ ದೇವಾಲಯ ನೂತನ ರಾಜಗೋಪುರದ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿರುವ ಜೀವನದ ಒಂದು ವಿಧಾನ. ಧರ್ಮ ಎಂದರೆ ಜಾತಿ, ಮತ ಎಂಬ ತಪ್ಪು ಕಲ್ಪನೆಯಿಂದ ನಡೆಯುತ್ತಿರುವ ಸಂಘರ್ಷಗಳು ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡುವುತ್ತಿವೆ. ಆದರೆ ಎಲ್ಲರೂ ಧರ್ಮವನ್ನು ಸರಿಯಾಗಿ ಅರ್ಥೈಸಿಕೊಂಡು ನಡೆದಿದ್ದಾದರೆ ಸಮಾಜದ ಸಾಮರಸ್ಯವನ್ನು ಕಾಪಾಡಲು ಸಾಧ್ಯ.
ತಿಂಡ್ಲು ಸೇರಿ ನಾಡಿನ ನಾನಾ ಭಾಗಗಳಲ್ಲಿರುವ ಪ್ರಾಚೀನ ವೀರಭದ್ರ ಕ್ಷೇತ್ರಗಳ ಮೂಲಸೆಲೆ ಶ್ರೀರಂಭಾಪುರಿ ಪೀಠದಲ್ಲಿ ಪೂಜೆಗೊಳ್ಳುವ ಕ್ಷೇತ್ರನಾಥ, ಗೋತ್ರಪುರುಷ ವೀರಭದ್ರಸ್ವಾಮಿಯಾಗಿದ್ದಾನೆ. ಪಂಚಪೀಠಗಳು ಈ ನಾಡಿನ ಭಕ್ತಸಮುದಾಯಕ್ಕೆ ಸದಾ ಧರ್ಮ-ಸಂಸ್ಕಾರವನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದು, ಪಂಚಪೀಠಗಳ ಗೋತ್ರ-ಸೂತ್ರಗಳ ಪರಂಪರೆ ಅದಕ್ಕೆ ಪೂರಕವಾಗಿದೆ.
ಮನುಷ್ಯ ಎಷ್ಟೇ ಹಣ, ಆಸ್ತಿ, ಅಂತಸ್ತು ಸಂಪಾದನೆ ಮಾಡಿದರೂ, ಜೀವನಕ್ಕೆ ಬೇಕಾದ ಮೂಲ ಅವಶ್ಯಕತೆಗಳನ್ನು ಸೃಷ್ಟಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅನ್ನ, ನೀರು, ಗಾಳಿ, ಬೆಳಕು ಇತ್ಯಾದಿ ಮೂಲ ವಸ್ತುಗಳನ್ನು ನೀಡಿರುವ ಭಗವಂತನ ಮುಂದೆ ಯಾವ ಸಂಪತ್ತು ಸರಿದೂಗಲಾರದು. ಅಂತಹ ಮಹದುಪಕಾರ ಮಾಡಿದ ಭಗವಂತನನ್ನು ದಿನಕ್ಕೆ ಎರಡು ನಿಮಿಷವಾದರೂ ಪೂಜಿಸದಿದ್ದರೆ ಮನುಷ್ಯನಾಗಿ ಹುಟ್ಟಿದ್ದು ವ್ಯರ್ಥವಾಗುತ್ತದೆ ಎಂದು ಜಗದ್ಗುರುಗಳು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ದೊಡ್ಡಗುಣಿ ಮಠದ ಶ್ರೀರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು, ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು, ಎಸ್‌ಜೆಆರ್ ಕಾಲೇಜಿನ ಅಧ್ಯಕ್ಷ ಯು.ಎಂ.ಬಸವರಾಜ್, ಕಾಯಕ್ರಮದ ಸಂಘಟಕರಾದ ಸಂತೋಷ ಕುಮಾರ್ ಮತ್ತು ದೇವಾಲಯ ಸಮಿತಿ ಪದಾಧಿಕಾಗಳು ಉಪಸ್ಥಿತರಿದ್ದರು.