ಧಾರವಾಡ: ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ದುರಂತಗಳು ಮತ್ತು ಕಠಿಣ ಸವಾಲುಗಳು ಮನುಷ್ಯನ ಗುರಿಯನ್ನು ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ ಹುಬ್ಬಳ್ಳಿಯ ಕುಸುಗಲ್ ಮೂಲದ ಪ್ರೊ. ರಮೇಶ್ ಸಂಕರಡ್ಡಿ ( Ramesh Sankaraddi ) ಅವರು ಜೀವಂತ ಉದಾಹರಣೆಯಾಗಿದ್ದಾರೆ. ಬಾಲ್ಯದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರೂ, ಧೃತಿಗೆಡದೆ ಶಿಕ್ಷಣವನ್ನೇ ಆಯುಧವನ್ನಾಗಿ ಮಾಡಿಕೊಂಡು ಮುನ್ನಡೆದ ರಮೇಶ್ ಅವರು ಇಂದು ಅದೆಷ್ಟೋ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ. ಕೇವಲ ಬದುಕುಕಟ್ಟಿಕೊಳ್ಳುವ ಹಂತದಲ್ಲಷ್ಟೇ ಅಲ್ಲದೆ, ಅಕ್ಷರ ಲೋಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ರಾಜ್ಯಶಾಸ್ತ್ರ ವಿಷಯದಲ್ಲಿ ಹತ್ತಾರು ಕೃತಿಗಳನ್ನು ರಚಿಸುವ ಮೂಲಕ ಅಸಾಧಾರಣ ಸಾಧನೆ ಮೆರೆದಿದ್ದಾರೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕುಸುಗಲ್ನಲ್ಲಿ 1980ರ ಸೆಪ್ಟೆಂಬರ್ 19ರಂದು ಜನಿಸಿದ ರಮೇಶ್ ಅವರು, ಸಾಮಾನ್ಯ ಮಕ್ಕಳಂತೆ ಕುಸುಗಲ್ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದರು. ಆದರೆ 1991ರಲ್ಲಿ ಕ್ರಿಕೆಟ್ ಆಡುವಾಗ ಕಾರ್ಕ್ ಬಾಲ್ ಕಣ್ಣಿಗೆ ಬಡಿದು ಗಂಭೀರ ಗಾಯಗೊಂಡು ದೃಷ್ಟಿ ಕಳೆದುಕೊಳ್ಳಬೇಕಾಯಿತು. ಈ ಆಘಾತದ ಬಳಿಕ ಐದು ವರ್ಷಗಳ ಕಾಲ ಮನೆಯಲ್ಲೇ ಇದ್ದ ಅವರು, ನಂತರ ಚಿಕ್ಕಮಗಳೂರಿನ ಅಂಧ ಮಕ್ಕಳ ಶಾಲೆಗೆ ಸೇರಿ ಅಂಧರು ಬಳಸುವ ಬ್ರೈಲ್ ಲಿಪಿ ಸೇರಿದಂತೆ ವಿಶೇಷ ಕೌಶಲ್ಯಗಳನ್ನು ಕಲಿತುಕೊಂಡರು. 1998ರಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್ಎಸ್ಎಲ್ಸಿ ತೇರ್ಗಡೆ ಹೊಂದಿ, ಗದುಗಿನ ರೆಡ್ಡಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತಮ್ಮ ವಿದ್ಯಾಭ್ಯಾಸದ ಛಲವನ್ನು ಮುಂದುವರಿಸಿದರು.
ಹುಬ್ಬಳ್ಳಿಯ ಆರೂಢಾ ಅಂಧ ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ದೂರ ಶಿಕ್ಷಣದ ಮೂಲಕ ಬಿ.ಎ., ಎಂ.ಎ. ಮತ್ತು ಬಿ.ಎಡ್ ಪದವಿಗಳನ್ನು ರಮೇಶ್ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದರು. ರಾಜ್ಯಶಾಸ್ತ್ರ ಮತ್ತು ಇತಿಹಾಸ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಉಭಯ ವಿಷಯಗಳಲ್ಲಿ ರಾಜ್ಯ ಅರ್ಹತಾ ಪರೀಕ್ಷೆಯನ್ನು (KSET) ತೇರ್ಗಡೆಹೊಂದಿದರು. ಪ್ರಸ್ತುತ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ಇವರು, 2001ರಿಂದ 2008ರವರೆಗೆ ಅಂಧ ಮಕ್ಕಳ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ, ನಂತರ 2008ರಿಂದ 2017ರವರೆಗೆ ಪಿಯು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅಂತಿಮವಾಗಿ 2017ರಲ್ಲಿ ಕೆಇಎ ನಡೆಸಿದ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, ಪ್ರಸ್ತುತ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಹೆಮ್ಮೆಯ ಸೇವೆ ಸಲ್ಲಿಸುತ್ತಿದ್ದಾರೆ.
ಬೋಧನಾ ವೃತ್ತಿಯ ಜತೆಗೆ ಸಾಹಿತ್ಯ ಮತ್ತು ಶೈಕ್ಷಣಿಕ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಪ್ರೊ. ರಮೇಶ್ ಸಂಕರಡ್ಡಿ ಅವರು, ರಾಜ್ಯಶಾಸ್ತ್ರ ವಿಷಯದ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬರೋಬ್ಬರಿ 22 ಕೃತಿಗಳನ್ನು ರಚಿಸಿದ್ದಾರೆ. ಕೇವಲ ಐದು ವರ್ಷಗಳ ಅಂತರದಲ್ಲಿ ಬರವಣಿಗೆಯ ಮೂಲಕ ಒಟ್ಟು 31 ಪುಸ್ತಕಗಳನ್ನು ಹೊರತಂದಿರುವುದು ಇವರ ಬೌದ್ಧಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದರೊಂದಿಗೆ ವಿವಿಧ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಏಳು ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಕತ್ತಲೆಯನ್ನು ಮೆಟ್ಟಿ ನಿಂತು, ತಮ್ಮ ಜ್ಞಾನದ ಬೆಳಕಿನಿಂದ ನೂರಾರು ವಿದ್ಯಾರ್ಥಿಗಳ ಬಾಳನ್ನು ಬೆಳಗುತ್ತಿರುವ ರಮೇಶ್ ಸಂಕರಡ್ಡಿ ಅವರ ಈ ಸಾಧನೆಯು ಸಮಾಜಕ್ಕೆ ಎಂದೆಂದಿಗೂ ದೊಡ್ಡ ಸ್ಫೂರ್ತಿಯಾಗಿದೆ.
ಧಾರವಾಡದಲ್ಲಿ ನವೆಂಬರ್ 18 ಮತ್ತು 19ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ, ಅಂಧತ್ವವನ್ನು ಮೆಟ್ಟಿ ನಿಂತು ಸಾಹಿತ್ಯ ಕೃಷಿ ಮಾಡಿರುವ ಪ್ರೊ. ರಮೇಶ್ ಸಂಕರಡ್ಡಿ ಅವರಂತಹ ವಿಶಿಷ್ಟ ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕೆಂಬ ಧ್ವನಿ ಈಗ ಪ್ರಜ್ಞಾವಂತ ಸಾಹಿತಿಗಳು ಹಾಗೂ ಸಾಹಿತ್ಯಾಭಿಮಾನಿಗಳಿಂದ ಬಲವಾಗಿ ಕೇಳಿಬರುತ್ತಿದೆ.