ಜಿಲ್ಲೆ

ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಭಾನುವಾರ ರಾತ್ರಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಮವಸರಣ ಪೂಜೆ ನಡೆಯಿತು.

ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದ ಬಳಿಕ ಭಗವಾನ್ ಚಂದ್ರನಾಥಸ್ವಾಮಿಯ ಅಷ್ಟವಿಧಾರ್ಚನೆ ಪೂಜೆ, ಸಿದ್ಧಪರಮೇಷ್ಠಿಗಳ ಪೂಜೆ, ಜಯಮಾಲಾ ಅರ್ಘ್ಯ, ಬಾಹುಬಲಿಸ್ವಾಮಿ ಪೂಜೆ, ಶ್ರುತದೇವಿ ಪೂಜೆ, ಗಣಧರಪರಮೇಷ್ಠಿ ಪೂಜೆ ಬಳಿಕ ದೀಪಾರಾಧನೆ, ಶಾಂತಿಧಾರಾ, ಪುಷ್ಪಾಂಜಲಿಯೊಂದಿಗೆ ಪೂಜಾ ಕಾರ್ಯಕ್ರಮ ಸಮಾಪನಗೊಂಡಿತು.

ಶಿಶಿರ್ ಇಂದ್ರರು ಪೂಜಾ ವಿಧಿ-ವಿಧಾನ ನೆರವೇರಿಸಿದರು. ಹೇಮಾವತಿ ವೀ.ಹೆಗ್ಗಡೆ ಮಾರ್ಗದರ್ಶನದಲ್ಲಿ ಸೌಮ್ಯ ಶುಭಚಂದ್ರ, ಸಾವಿತ್ರಿ ಪುಷ್ಪ್ಪದಂತ, ಮಂಜುಳಾ ಮಲ್ಲಿನಾಥ್, ಭಾರತಿ ಸಂಸ್ಕೃತ, ಪ್ರಾಕೃತ, ಕನ್ನಡ, ಹಿಂದಿ, ತುಳು ಭಾಷೆಯಲ್ಲಿ ರಚಿತವಾದ ಜಿನಭಕ್ತಿಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಬೆಂಗಳೂರಿನ ನವೀನ್‌ಜಾಂಬಳೆ ಮತ್ತು ಬಳಗದವರು ಮೂಡಬಿದಿರೆಯ ವೀಣಾ ರಘುಚಂದ್ರ ಶೆಟ್ಟಿ ರಚಿಸಿದ ಜಿನಭಕ್ತಿಗೀತೆ ಹಾಡಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ವಿಶೇಷ ಸಂದರ್ಭದಲ್ಲಿ ಕಳೆದ ಮೂವತ್ತು ವಷರ್ಗಳಿಂದ ಪಾಕಪರಿಣತರಾಗಿ ಅಡುಗೆ ವಿಭಾಗದಲ್ಲಿ ಸಹಕರಿಸಿದ ಬಂಗಾಡಿಯ ಸನತ್‌ಕುಮಾರ ಜೈನ್, ರವಿರಾಜ ಜೈನ್ ಅವರನ್ನು ಗೌರವಿಸಲಾಯಿತು.

ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆದ ಸಮಾರಂಭದಲ್ಲಿ ಸುರೇಂದ್ರಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ಯಶೋವರ್ಮ, ಕುಟುಂಬಸ್ಥರು ಉಪಸ್ಥಿತರಿದ್ದರು. ಉದಯ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಸಮವಸರಣ ಎಂದರೇನು?

ತೀರ್ಥಂಕರರು ತಮ್ಮ ದಿವ್ಯ ಧ್ವನಿಯಿಂದ ಉಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಸದಾವಕಾಶ ಇದೆ. ಸಮವಸರಣ ಎಂಬುವುದು ಒಂದು ವಿಶ್ವಕೋಶ. ಜೈನಾಗಮದ ಸಮಸ್ತ ಸಾರವನ್ನು ಪ್ರಚುರಪಡಿಸಿದ ವಿಶ್ವವಿದ್ಯಾಲಯ.