ಜಿಲ್ಲೆ

ದೇಗುಲ ತಲುಪಲು ಹರಸಾಹಸ!: ಹೆದ್ದಾರಿ ವಿಸ್ತರಣೆಯಿಂದ ಭಕ್ತರು ಹೈರಾಣ : ಉಪ್ಪಿನಂಗಡಿಯಲ್ಲಿ ಸಂಕಷ್ಟ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಹೆದ್ದಾರಿ ವಿಸ್ತರಣೆ ಕಾಮಗಾರಿಯ ಕಾರಣದಿಂದ ಕುಮಾರಧಾರಾ ಸೇತುವೆ ಬಳಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಇದ್ದ ರಸ್ತೆಯು ಮುಚ್ಚಲ್ಪಟ್ಟಿದ್ದು, ಇದರ ಅರಿವಿಲ್ಲದೆ ಸೇತುವೆಯ ಬಳಿ ಬಸ್ಸಿನಿಂದ ಇಳಿಯುವ ಪರ ಊರಿನ ಭಕ್ತರು ಅಪಾಯಕಾರಿ ಸ್ಥಳದಿಂದ ದೇವಾಲಯಕ್ಕೆ ಹೋಗುವ ಯತ್ನ ಮಾಡುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಈ ಹಿಂದೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯಕ್ಕೆ ಬರುವ ಭಕ್ತರು ಉಪ್ಪಿನಂಗಡಿ ಕುಮಾರಧಾರಾ ಸೇತುವೆ ದಾಟಿದಾಕ್ಷಣ ಬಸ್ಸಿನಿಂದ ಇಳಿದು ಹೆದ್ದಾರಿಗಿದ್ದ ಸಂಪರ್ಕ ರಸ್ತೆ ಮೂಲಕ ದೇವಾಲಯದತ್ತ ಸಾಗುತ್ತಿದ್ದರು. ಇದೀಗ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲಿದ್ದ ಸಂಪರ್ಕ ರಸ್ತೆ ಮುಚ್ಚಲ್ಪಟ್ಟಿದೆ. ಹೆದ್ದಾರಿಯು ಮೊದಲಿಗಿಂತ ಹೆಚ್ಚು ಎತ್ತರಿಸಲ್ಪಟ್ಟಿದೆ. ಈ ಬೆಳವಣಿಗೆ ಅರಿವಿಲ್ಲದ ಭಕ್ತರು, ಮುಖ್ಯವಾಗಿ ದೇವಾಲಯದಲ್ಲಿ ನಡೆಯುವ ಉತ್ತರಕ್ರಿಯೆ ಕಾರ್ಯಕ್ರಮಕ್ಕೆಂದು ಆಗಮಿಸುವ ಹೊರ ಊರುಗಳ ಜನತೆ ಎಂದಿನಂತೆ ಬಸ್ಸಿನಲ್ಲಿ ಬಂದು ಸೇತುವೆ ದಾಟಿದಾಕ್ಷಣ ಬಸ್ಸಿನಿಂದ ಇಳಿಯುತ್ತಾರೆ. ಹೀಗೆ ಇಳಿದ ಮಂದಿಗೆ ದೇವಾಲಯಕ್ಕೆ ಹೋಗುವ ದಾರಿ ಕಾಣಿಸದಾಗಿ ಕಂಡ ಕಂಡಲ್ಲಿ ಇಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಎದೆಯಲ್ಲಿ ನಡುಕ ಮೂಡಿಸುವ ಸಾಹಸ

ವೃದ್ಧರಾದಿಯಾಗಿ ದೇವಾಲಯಕ್ಕೆಂದು ಬಂದವರು ಸೇತುವೆ ದಾಟಿ ಬಸ್ಸಿನಿಂದ ಇಳಿದ ಬಳಿಕ ದೇವಾಲಯಕ್ಕೆ ಹೋಗುವ ದಾರಿ ಕಾಣದೆ ಹತ್ತಿಪ್ಪತ್ತು ಅಡಿ ಎತ್ತರದ ತಡೆಗೋಡೆಯ ಸನಿಹದಲ್ಲೇ ಇಳಿಯಲು ಯತ್ನಿಸುತ್ತಿರುವ ದೃಶ್ಯ ಭಯಾನಕವಾಗಿದ್ದು, ನೋಡುಗರ ಎದೆಯಲ್ಲಿ ನಡುಕ ಮೂಡಿಸುವಂತಿದೆ. ಒಂದಿನಿತು ಕಾಲು ಜಾರಿದರೂ ಪ್ರಾಣಕ್ಕೆ ಅಪಾಯವುಂಟಾಗುವ ಸಾಧ್ಯತೆ ಇದೆ.

ಹೂತು ಹೋಗಿದ್ದ ಮಹಿಳೆಯರು

ಕಳೆದ ತಿಂಗಳು ಇಲ್ಲಿನ ಮೊದಲಿದ್ದ ಸಂಪರ್ಕ ರಸ್ತೆಯನ್ನು ಬಳಸುವ ಸಲುವಾಗಿ ಬಸ್ಸಿನಿಂದ ಇಳಿದಿದ್ದ ಮಹಿಳೆಯರು ಕಾಮಗಾರಿ ನಿರತ ಸ್ಥಳದಿಂದ ದಾಟಲು ಯತ್ನಿಸಿ ಮಣ್ಣಿನ ಹೂತು ಹೋಗಿ ಜೆಸಿಬಿ ಯಂತ್ರದ ಸಹಾಯದಿಂದ ಅವರನ್ನು ಮೇಲೆತ್ತಲಾಗಿತ್ತು. ಬಳಿಕ ಮಣ್ಣು ಮೃದುವಾಗಿದ್ದ ಸ್ಥಳದಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದೀಗ ಬದಲಿ ಸ್ಥಳದಿಂದ ಬಂದು ದೇವಾಲಯಕ್ಕೆ ಶಾರ್ಟ್ ಕಟ್ ರಸ್ತೆಯಲ್ಲಿ ಹೋಗಲು ಯತ್ನಿಸಿ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ದಟ್ಟವಾಗಿದೆ.

ತಾತ್ಕಾಲಿಕ ವ್ಯವಸ್ಥೆಗೆ ಬೇಡಿಕೆ

ಸುರಕ್ಷಿತ ದಾರಿ ಬಗ್ಗೆ ಮಾಹಿತಿ ನೀಡುವ ಸೂಚನಾಫಲಕ ಹಾಕಬೇಕು. ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಅಸಾಧ್ಯವೆಂದಾದರೆ ಸೇತುವೆಯ ಬಳಿ ಬಸ್ಸಿನಿಂದ ಇಳಿಸುವ ಪ್ರಕ್ರಿಯೆಯನ್ನು ತಡೆಗಟ್ಟುವ ಬಗ್ಗೆಯಾದರೂ ಗಮನ ನೀಡಬೇಕು. ಒಟ್ಟಾರೆ ದೇವಾಲಯಕ್ಕೆಂದು ಬಂದವರು ಬದುಕು ಕಳೆದುಕೊಳ್ಳುವ ಸ್ಥಿತಿ ನಿಮಾಣವಾಗಬಾರದೆಂದು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ವಯಸ್ಸಾದ ಭಕ್ತರು ಈ ಹಿಂದೆ ಇದ್ದ ಸುಲಭವಾಗಿ ಸಂಪರ್ಕ ಸಾಧಿಸುವ ರಸ್ತೆ ಅಂದಾಜಿಸಿ ಕುಮಾರಧಾರಾ ಸೇತುವೆ ದಾಟಿದಾಕ್ಷಣ ಬಸ್ಸಿನಿಂದ ಇಳಿಯುತ್ತಾರೆ. ಬಳಿಕ ಯಾವುದೇ ರಸ್ತೆ ಇಲ್ಲದನ್ನು ತಿಳಿದು ಕಂಡಕಂಡಲ್ಲಿ ಇಳಿಯಲು ಪ್ರಯತ್ನಿಸುತ್ತಾರೆ. ಪ್ರಸಕ್ತ ಈ ಭಾಗದಲ್ಲಿ ಯಾವುದೇ ರೀತಿಯಲ್ಲಿ ಸುರಕ್ಷಿತವಾಗಿ ಇಳಿಯುವ ವ್ಯವಸ್ಥೆ ಇಲ್ಲದಿರುವುದರಿಂದ ವೃದ್ಧರು ಎದ್ದು ಬಿದ್ದು ಸಾಗುವ ದೃಶ್ಯ ಕಳವಳವನ್ನು ಮೂಡಿಸುವಂತಿದೆ. ಈ ಕಾರಣಕ್ಕೆ ತಾತ್ಕಾಲಿಕ ನೆಲೆಯಲ್ಲಿಯಾದರೂ ಸುರಕ್ಷಿತವಾಗಿ ಹೆದ್ದಾರಿಯಿಂದ ದೇವಾಲಯದ ರಸ್ತೆಗೆ ಇಳಿಯುವ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಸ್ವರ್ಣೇಶ್ ಗಾಣಿಗ ಉದ್ಯಮಿ ಪ್ರಸಕ್ತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಮ್ಮ ನಿರೀಕ್ಷೆಯ ವೇಗಕ್ಕೆ ತಕ್ಕಂತೆ ಕಾಮಗಾರಿ ನಡೆಸಲಾಗುತ್ತಿಲ್ಲ. ಆದಾಗ್ಯೂ ಹೆದ್ದಾರಿಯಿಂದ ದೇವಾಲಯದ ರಸ್ತೆಗೆ ಸಂಪರ್ಕ ಕಲ್ಪಿಸುವ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅತೀ ಎತ್ತರದ ತಡೆಗೋಡೆಯ ಬಳಿಯಿಂದ ಜನರು ಇಳಿಯಲು ಯತ್ನಿಸುವ ದೃಶ್ಯ ಕಳವಳ ಮೂಡಿಸಿದೆ. ರುನಾಥ ರೆಡ್ಡಿ, ಹೆದ್ದಾರಿ ಅಗಲೀಕರಣದ ಕಾಮಗಾರಿ ನಿರತ ಇಂಜಿನಿಯರ್