ಜಿಲ್ಲೆ

"ದೆಹಲಿಯಲ್ಲಿ ಬೆಳವಣಿಗೆಗಳು ಆಗ್ತಿವೆ, 2-3 ದಿನಗಳಲ್ಲಿ ಗೊತ್ತಾಗಲಿದೆ..."

rashmirhebbur

ಹೊಸಕೋಟೆ : ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಬಿಎಸ್​​ವೈ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಎಂ.ಟಿ.ಬಿ.ನಾಗರಾಜ್, ದೆಹಲಿಯಲ್ಲಿ ಏನೋ ಒಂದು ರೀತಿ ಬೆಳವಣಿಗೆಗಳು ಆಗ್ತಿವೆ, ಏನು ಬೆಳವಣಿಗೆ ಆಗ್ತಿದೆ ಅನ್ನೋದು ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.

ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗರಾಜ್​, "ನಾನು ಹತ್ತಾರು ಬಾರಿ ಹೇಳಿದ್ದೇನೆ - ಹೈಕಮಾಂಡ್ ಯಾವುದೇ ತಿರ್ಮಾನ ತೆಗೆದುಕೊಂಡರೂ ಯಡಿಯೂರಪ್ಪ ಒಪ್ಪಿಕೊಳ್ತಾರೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ, ಪಕ್ಷ ದೊಡ್ಡದು" ಎಂದರು. ಬಿಎಸ್​​ವೈ ಪಕ್ಷವನ್ನ ಕಟ್ಟಿ‌ಬೆಳೆಸಿದ್ದಾರೆ, ಆದರೆ ಅವರಿಗೆ ಸ್ವಲ್ಪ ಸಮಸ್ಯೆಯಿದೆ. ವಯಸ್ಸಾಗಿದೆ, ಆರೋಗ್ಯ ಸಮಸ್ಯೆಯಿದೆ, ಆದರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ತಿದ್ದಾರೆ. ಇವತ್ತು ಅವರಾಗಿಯೇ ಹೇಳಿದ್ದಾರೆ, ಹೈಕಮಾಂಡ್ ಹೇಳಿದ್ರೆ ಅವರು ಬದ್ದವಾಗಿಯೇ ಇದ್ದಾರೆ ಎಂದಿದ್ದಾರೆ.

ಜೊತೆಗೆ, ದೆಹಲಿಯಲ್ಲಿ ಏನೋ ಬೆಳವಣಿಗೆಗಳು ನಡೀತಾ ಇವೆ ಎಂದಿರುವ ನಾಗರಾಜ್​, "ಬಿಜೆಪಿಯಲ್ಲಿ ಪರ್ಯಾಯ ನಾಯಕರು ಬೇಕಾದಷ್ಟು ಜನ ಇದ್ದಾರೆ, ಎರಡು ಮೂರು ಬಾರಿ ಮಂತ್ರಿಗಳಾಗಿದ್ದು, ಸಿಎಂ ಸ್ಥಾನ ನಿಭಾಯಿಸಬಲ್ಲ‌ ನಾಯಕರಿದ್ದಾರೆ, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಏನೇ‌ ನಿರ್ಧಾರ ತೆಗೆದುಕೊಂಡರೂ ನಾವು ‌ಬದ್ಧರಾಗಿರುತ್ತೇವೆ ಎಂದಿದ್ದಾರೆ.