'ಯಡಿಯೂರಪ್ಪ ಅವರೇ ನಮ್ಮ ನಾಯಕರು' ಎಂದ ಸಿ.ಪಿ.ಯೋಗೇಶ್ವರ್... ರಾಜೀನಾಮೆಗೂ ಸಿದ್ಧವಂತೆ!

CP Yogeshwar vvani
Published on

ರಾಮನಗರ : ಸಿಎಂ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡಿ ರಾಜಕೀಯ ಚರ್ಚೆಗೆ ಕಾರಣರಾಗಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಆಹಾರ ಕಿಟ್​ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೇಗೇಶ್ವರ್​, "ಯಡಿಯೂರಪ್ಪ ಅವರೇ ನಮ್ಮ ಪಕ್ಷದ ನಾಯಕರು" ಎಂದಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಮ್ಮ ಸ್ನೇಹಿತರು ಸಾವಿರಾರು ಕಿಟ್​​ಗಳನ್ನು ಕೊಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಬಿಜೆಪಿ ಕಾರ್ಯಕರ್ತರು ಆಹಾರವನ್ನು ವಿತರಣೆ ಮಾಡ್ತಿದ್ದಾರೆ. ಹೀಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದ ಯೋಗೇಶ್ವರ್, ನಾನು ರಾಜಕೀಯ ವಿಚಾರವಾಗಿ ಯಾವುದೇ ಹೇಳಿಕೆ ಕೊಡುವುದಿಲ್ಲ. ನನ್ನ ಹೇಳಿಕೆ ಸಾಕಷ್ಟು ಸುದ್ದಿಯಾಗಿದೆ. ನಾನು ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಿಲ್ಲ. ಮುಖ್ಯಮಂತ್ರಿ ಬಗ್ಗೆ ನಾನು ಮಾತನಾಡಿ ಯಾವುದೇ ಗೊಂದಲಕ್ಕೆ ಸಿಲುಕಿಸಬೇಡಿ ಎಂದರು.

ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದಲ್ಲಿ ಉನ್ನತ ನಾಯಕರು ಇದ್ದಾರೆ. ನನಗೆ ಪಕ್ಷ ರಾಜೀನಾಮೆ ಕೊಡು ಎಂದರೆ ಕೊಡಬೇಕಾಗುತ್ತದೆ. ಪಕ್ಷದ ಹೈಕಮಾಂಡ್ ಹಾಗೂ ಸಿಎಂ ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ಧ ಎಂದಿರುವ ಯೋಗೇಶ್ವರ್, "ನನ್ನ ಒಂದು ಹೇಳಿಕೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತೆ ಅನ್ನೋದು ಗೊತ್ತಿರಲಿಲ್ಲ. ನಾನು ಸಿಎಂ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ, ನೀಡುವುದೂ ಇಲ್ಲ. ಯಡಿಯೂರಪ್ಪ ಅವರೆ ನಮ್ಮ ಪಕ್ಷದ ನಾಯಕರು. ನಾನು ಸ್ವಾಭಾವಿಕವಾಗಿ ಆ ಹೇಳಿಕೆ ನೀಡಿದ್ದೆ ಅಷ್ಟೆ" ಎಂದು ಹೇಳಿ ಅಚ್ಚರಿ ಮೂಡಿಸಿದರು.

ಜೊತೆಗೆ, ರಾಜ್ಯದಲ್ಲಿ ವಿರೋಧ ಪಕ್ಷಗಳು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆಯಲ್ಲಿ ಚೆನ್ನಾಗಿ ಇದ್ದಾರೆ. ಹಾಗಾಗಿ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು. ಆದರೆ ಯಡಿಯೂರಪ್ಪ ಅವರ ಬಗ್ಗೆ ನಾನು ಯಾವಾಗಲೂ ಮಾತನಾಡಿಲ್ಲ. ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪನವರೇ ನಾಯಕರು. ಹಾಗಾಗಿ ನಾನು ಅವರ ಬಗ್ಗೆ ಹಿಂದೆಯೂ ಮಾತನಾಡಿಲ್ಲ, ಈಗಲೂ ಮಾತನಾಡಲ್ಲ. ಅವರ ಬಗ್ಗೆ ನಾನು‌ ಯಾವಾಗಲೂ ಸಾಫ್ಟ್, ಅವರು ನಮ್ಮ ನಾಯಕರು ಎಂದು ಯೋಗೇಶ್ವರ್ ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net