ವಿಜಯವಾಣಿ ಸುದ್ದಿಜಾಲ ಬೈಂದೂರು
ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕುದ್ರುಕೋಡು ಜಗದೀಶ ಶೆಟ್ಟಿ ಹೇಳಿದರು.
ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ಗೆ ಶುಕ್ರವಾರ ಭೇಟಿ ನೀಡದ ಬಳಕ ಉಪ್ಪುಂದ ನಂದನವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಲಯನ್ಸ್ ಜಿಲ್ಲೆ 317ಸಿ, ಪ್ರಾಂತ್ಯ 6ರ ವ್ಯಾಪ್ತಿಯಲ್ಲಿ ಬರುವ ಹತ್ತು ಕ್ಲಬ್‌ಗಳು ಈ ವರ್ಷ ವಿವಿಧ ಭಾಗಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸ ತಂದಿದೆ. ಪ್ರಸಕ್ತ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜದ ದುರ್ಬಲರ ಸೇವೆಯಲ್ಲಿ ಕೈಜೋಡಿಸಿರುವುದು ಅರ್ಥಪೂರ್ಣ ಎಂದರು.
ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ವಲಯಾಧ್ಯಕ್ಷ ಗಿರೀಶ ಶ್ಯಾನುಭಾಗ್, ಪ್ರಾಂತೀಯ ಕಾರ್ಯದರ್ಶಿ ನರಸಿಂಹ ದೇವಾಡಿಗ ಇದ್ದರು. ಘಟಕದ ಖಜಾಂಚಿ ಸುಂದರ ಕೊಠಾರಿ ವರದಿ ಮಂಡಿಸಿದರು. ಘಟಕದ ಕಾರ್ಯದರ್ಶಿ ಸುನಿಲ್ ಜೆ.ಪೂಜಾರಿ ವಂದಿಸಿದರು. ಗಾಯಡಿ ವಿಶ್ವನಾಥ ಶೆಟ್ಟಿ ನಿರೂಪಿಸಿದರು.
ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆ ಪ್ರಯುಕ್ತ ಕ್ಲಬ್ಬಿನ ಪೂರ್ವಾಧ್ಯಕ್ಷರಾದ ಜಯಶೀಲ ಶೆಟ್ಟಿ, ಪ್ರಭಾಕರ ಶೆಟ್ಟಿ ಹಾಗೂ ಚೇರ್ಕಾಡಿ ರವಿರಾಜ್ ಹೆಗ್ಡೆ ನೀಡಿದ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಪ್ರಾಂತೀಯ ಅಧ್ಯಕ್ಷ ಕುದ್ರುಕೋಡು ಜಗದೀಶ ಶೆಟ್ಟಿ ಹಾಗೂ 57 ಬಾರಿ ರಕ್ತದಾನ ಮಾಡಿದ ಕ್ಲಬ್ ಸದಸ್ಯ ಉದಯ್ ಡಿ.ಆರ್. ಅವರನ್ನು ಸನ್ಮಾನಿಸಲಾಯಿತು.