ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ತ್ರೈಮಾಸಿಕ ಕೆಡಿಪಿ ಸಭೆಗಳಿಗೆ ಸಂಬಂಧಿತ ಇಲಾಖಾ ಅಧಿಕಾರಿಗಳು ನಿರಂತರ ಗೈರಾಗುತ್ತಿರುವುದರಿಂದ ಗ್ರಾಮದ ಅಭಿವೃದ್ಧಿಗೆ ತೊಡಕುತ್ತಿವೆ. ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಇಲಾಖೆಯಲ್ಲಿ ಇಂಜಿನಿಯರ್‌ಗಳ ಕೊರತೆಯಿಂದ ಜೆಜೆಎಂ ಕಾಮಗಾರಿಗಳು ಕುಂಠಿವಾಗುತ್ತಿದ್ದು, ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ತೊಂದರೆ ಉಂಟಾಗುತ್ತಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ವಿವಿಧ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ತ್ರೈಮಾಸಿಕ ಕೆಡಿಪಿ ಸಭೆಗಳಿಗೆ ನಿರ್ದಿಷ್ಟ ಇಲಾಖೆಗಳ ಅಥವಾ ಗ್ರಾಮಮಟ್ಟದ ಅಧಿಕಾರಿಗಳು ಹಾಜರಾಗಬೇಕು. ಅಧಿಕಾರಿಗಳು ಗೈರಾದರೆ ಸಂಬಂಧಿತ ಗ್ರಾಮ ಪಂಚಾಯಿತಿಯಿಂದ ಪಡೆಯುವ ವರದಿ ಆಧರಿಸಿ ಕಡ್ಡಾಯವಾಗಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಲು ಕ್ರಮಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಜತೆಗೆ ಕಾನೂನು ಕ್ರಮ ಕೂಡ ಕೈಗೊಳ್ಳಲಾಗುತ್ತದೆ ಎಂದರು.
ಲೋಕೋಪಯೋಗಿ ಇಲಾಖೆಯ ವಿವಿಧ ವೃಂದದ ಇಂಜಿನಿಯರ್‌ಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳಿಸಲಾಗಿರುತ್ತದೆ. 2024ನೇ ಸಾಲಿನಲ್ಲಿ 270 ಸಹಾಯಕ ಇಂಜಿನಿಯರ್ (ಗ್ರೇಡ್-1) ಮತ್ತು 80 ಹಿರಿಯ ಇಂಜಿನಿಯರ್‌ಗಳನ್ನು ನೇಮಕಗೊಳಿಸಿ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ. ಖಾಲಿ ಉಳಿದ ಹುದ್ದೆಗಳಿಗೆ ಅನ್ಯ ಇಲಾಖೆಯ ಇಂಜಿನಿಯರ್‌ಗಳ ಸೇವೆ ಪಡೆದು ನಿಯೋಜನೆ ಮೇರೆಗೆ ಭರ್ತಿ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.