ಹನುಮಸಾಗರ: ಪಟ್ಟಣದಿಂದ ಗಜೇಂದ್ರಗಡ ಸಂಪರ್ಕಿಸುವ ರಸ್ತೆ ತಗ್ಗು-ಗುಂಡಿಗಳಿಂದ ಆವೃತ್ತವಾಗಿದ್ದು, ಮಳೆ ನೀರಿಗೆ ಮಾರ್ಗದ ಗುಂಡಿಗಳೆಲ್ಲ ಕೆರೆಯಂತಾಗುತ್ತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಹನುಮಸಾಗರದ ಹೊಸ ಬಸ್ ನಿಲ್ದಾಣದಿಂದ ಗಜೇಂದ್ರಗಡ ಪಟ್ಟಣ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಮಡಿಕೇರಿ, ಬೆನಕನಾಳ, ಯಲಬುಣಚಿ ಗ್ರಾಮ ಸೇರಿ ಯಲಬುರ್ಗಾ, ಗದಗ, ಹುಬ್ಬಳ್ಳಿಗೆ ಹೋಗುವವರಿಗೂ ಈ ರಸ್ತೆಯೇ ಆಸರೆಯಾಗಿದೆ. ರಸ್ತೆ ಹಾಳಾಗಿದ್ದರಿಂದ ವಾಹನ ಸವಾರರು, ಜಮೀನುಗಳಿಗೆ ತೆರಳುವ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಎದುರು ಬರುವ ವಾಹನಕ್ಕಿಲ್ಲ ಜಾಗ:
ರಸ್ತೆಯ ಇಕ್ಕೆಲಗಳಲ್ಲಿ ಜಾಲಿಗಿಡಗಳು ಬೆಳೆದಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಪೆಳೆಯಂತೆ ರಸ್ತೆಗೆ ಕವಿದಿರುವುದರಿಂದ ಮುಂದೆ ಬರುವ ವಾಹನಗಳಿಗೆ ಸೈಡ್ ತೆಗೆದುಕೊಳ್ಳಲು ಜಾಗವಿಲ್ಲದಂತಾಗಿದೆ.
ಮಕ್ಕಳಿಗೂ ತೊಂದರೆ:
ರಸ್ತೆಗೆ ಹಾಕಲಾದ ಡಾಂಬರ್ ಕಿತ್ತಿರುವುದರಿಂದ ಜಲ್ಲಿ ಕಲ್ಲುಗಳು ಮೇಲೆದ್ದು, ದೊಡ್ಡ ದೊಡ್ಡ ತಗ್ಗುಗಳು ನಿರ್ಮಾಣಗೊಂಡಿವೆ. ಇವು ಮಳೆ ಬಂದಾಗ ನೀರು ಸಂಗ್ರಹಗೊಂಡು ಕೆರೆಯಾಗಿ ಮಾರ್ಪಡುತ್ತಿವೆ. ಇದರಿಂದ ರೋಗಿಗಳು ಗದಗ, ಹುಬ್ಬಳ್ಳಿಯಂತಹ ನಗರಗಳಿಗೆ ಹೋಗುವಾಗ ಕಷ್ಟ ಅನುಭವಿಸುವಂತಾಗಿದೆ. ರೈತರು ಹೋಲಗಳಿಗೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇದೇ ಮಾರ್ಗದಲ್ಲಿ ಖಾಸಗಿ ಶಾಲೆಯೂ ಇದ್ದು, ಮಕ್ಕಳಿಗೂ ತೊಂದರೆ ತಪ್ಪದಾಗಿದೆ.
ಹನುಮಸಾಗರದ ಹೊಸ ಬಸ್ ನಿಲ್ದಾಣದಿಂದ ಮಡಿಕೇರಿ ಮಾರ್ಗವಾಗಿ ಗಜೇಂದ್ರಗಡ ತಲುಪುವ ರಸ್ತೆ ಅಭಿವೃದ್ಧಿ ಪಡಿಸುವಂತೆ ಹಾಗೂ ಹೊಸ ಬಸ್ ನಿಲ್ದಾಣ ಪ್ರಗತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಹಾಗೂ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲಾಗುವುದು.ಎಚ್. ದೊಡ್ಡನಗೌಡ ಪಾಟೀಲ್, ಕುಷ್ಟಗಿ ಶಾಸಕ
-_________________________________