ಶಶಿ ಕುತ್ಯಾಳ ಈಶ್ವರಮಂಗಲ
ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಸಂಪರ್ಕ ರಸ್ತೆಗಳು ಅಭಿವೃದ್ಧಿಗೊಂಡಿವೆ.ಆದರೆ ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ತಡ್ಕ -ನಾಡಾಜೆ ರಸ್ತೆ ಸಂಪೂರ್ಣ ಹದಗೆಟ್ಟು, ವಾಹನಗಳು ಮಾತ್ರವಲ್ಲದೆ ಜನಸಂಚಾರಕ್ಕೂ ನಾಲಾಯಕ್ ಆಗಿದೆ.
ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯಿಂದ ಕರೆಮನೆಕಟ್ಟೆ, ಮರ್ತಡ್ಕ, ನಾಡಾಜೆ, ಹಿಂದಾರು ಮೂಲಕವಾಗಿ ಪುತ್ತೂರು-ಮುಂಡೂರು ರಸ್ತೆಯ ಕಂಪಕ್ಕೆ ನೇರ ಸಂಪರ್ಕದ ರಸ್ತೆ ಇದು. ಕರೆಮನೆ ನಾಗನ ಕಟ್ಟೆಯಿಂದ ರೈಲ್ವೆ ಸೇತುವೆ ಕ್ರಾಸಿಂಗ್‌ನ ನಂತರ ಸುಮಾರು 200 ಮೀಟರ್‌ನಷ್ಟು ಭಾಗದ ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಆ ನಂತರದ ಕಚ್ಚಾರಸ್ತೆಯಲ್ಲಿ ಕಾಲನಿ ವ್ಯಾಪ್ತಿಯ ಸ್ಪಲ್ಪ ಭಾಗದ ರಸ್ತೆ ಡಾಂಬರೀಕರಣಗೊಂಡಿದೆ. ಉಳಿದ ಭಾಗ ಅಭಿವೃದ್ಧಿ ಕಾಣದೆ ಕಚ್ಚಾರಸ್ತೆಯಾಗಿಯೇ ಉಳಿದುಕೊಂಡಿದ್ದು, ಮಳೆಗಾಲದಲ್ಲಿ ವಾಹನ ಸಂಚಾರ ಮಾತ್ರವಲ್ಲದೆ ಜನಸಂಚಾರಕ್ಕೂ ತೀರಾ ಸಮಸ್ಯೆಯಾಗಿದೆ.
ಡಾಂಬರೀಕರಣವಾಗದೆ ಉಳಿದುಕೊಂಡಿರುವ ಮರ್ತಡ್ಕ-ನಾಡಾಜೆ ವ್ಯಾಪ್ತಿಯ ರಸ್ತೆ ಭಾಗ ಕೆಸರುಮಯವಾಗಿದ್ದು, ಮಳೆನೀರು ಹರಿದು ಹೋಗಿ ಮತ್ತು ವಾಹನಗಳ ಸಂಚಾರದಿಂದಾಗಿ ರಸ್ತೆಯಲ್ಲಿ ಕಣಿಗಳು ಸೃಷ್ಟಿಯಾಗಿವೆ. ಮಳೆಯ ಸಂದರ್ಭ ಈ ರಸ್ತೆ ತೋಡಾಗಿ ಪರಿಣಮಿಸುತ್ತಿದ್ದು, ರಸ್ತೆಯೇ ಕಾಣದಾಗುತ್ತದೆ. ಹಿಂದಾರಿನಿಂದ ಪಜಿಮಣ್ಣು-ನಾಡಾಜೆ ಸಂಪರ್ಕದ ಕಚ್ಚಾ ರಸ್ತೆಯೂ ತೀರಾ ಹದಗೆಟ್ಟಿದೆ.
ಈ ಪಂಚಾಯಿತಿ ರಸ್ತೆಯ ಅಭಿವೃದ್ಧಿಯ ವಿಚಾರದಲ್ಲಿ ಮುಂಡೂರು ಗ್ರಾಮ ಪಂಚಾಯಿತಿ ಆಸಕ್ತಿ ತೋರಿಲ್ಲ. ಹಿಂದೊಮ್ಮೆ ನಾವು ಪಂಚಾಯಿತಿಗೆ ತೆರಳಿ ಈ ಕುರಿತು ಮನವಿ ಮಾಡಿಕೊಂಡಿದ್ದ ವೇಳೆ ಪಂಚಾಯಿತಿಯವರು ಅನುದಾನ ಇಡುತ್ತೇವೆ ಎಂದು ತಿಳಿಸಿದ್ದರೆ ಹೊರತು ಅಭಿವೃದ್ಧಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಳ್ಳಿಯ ಜನತೆಯ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಈ ಭಾಗದ ಜನತೆಯ ಆರೋಪ.
ನಾಡಾಜೆಯಿಂದ ಕೇದಗೆದಡಿ-ಪುಳಿಂಜೆತ್ತಡಿ-ಕುರೆಮಜಲು ಮೂಲಕವಾಗಿ ಪಂಜಳಕ್ಕೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆ ಅಲ್ಲಿನ ನಿವಾಸಿಗಳ ಪಟ್ಟಾ ಸ್ಥಳದ ಮೂಲಕ ಹಾದು ಹೋಗಿದೆ. ಆದರೆ ಮರ್ತಡ್ಕ-ನಾಡಾಜೆ ರಸ್ತೆಯಲ್ಲಿ ಒಂದೆರಡು ಕಡೆಗಳಲ್ಲಿ ಮಾತ್ರ ಪಟ್ಟಾ ಜಾಗದ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತುಕತೆಯ ಮೂಲಕ ಪರಿಹರಿಸಿ ಈ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಅತಿ ಶೀಘ್ರವಾಗಿ ಕೈಗೆತ್ತಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನತೆಗೆ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂಬುದು ಆ ಭಾಗದ ಗ್ರಾಮಸ್ಥರ ಆಗ್ರಹ.
ಕರೆಮನೆ ಕಟ್ಟೆಯಿಂದ ಮರ್ತಡ್ಕ ಸಮೀಪದ ತನಕ ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಹಿಂದಾರಿನಿಂದ ಕಂಪ ತನಕದ ರಸ್ತೆ ಭಾಗವೂ ಡಾಂಬರೀಕರಣಗೊಂಡಿದೆ. ಆದರೆ ನಡುವಣ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಈ ಸಂಪರ್ಕ ರಸ್ತೆಯ ಪ್ರಯೋಜನ ಈ ಭಾಗದ ಹೆಚ್ಚಿನ ಮಂದಿಗೆ ಇಲ್ಲದಾಗಿದೆ. ಎಲ್ಲ ಕೆಲಸ ಕಾರ್ಯಗಳಿಗೂ ಗ್ರಾಪಂಯನ್ನು ಅವಲಂಬಿಸಿಕೊಂಡಿರುವ ಈ ಭಾಗದ ಜನತೆ ಗ್ರಾಮ ಪಂಚಾಯಿತಿ ಕಚೇರಿ ಇರುವ ಮುಂಡೂರಿಗೆ ತೆರಳಲು ಸುತ್ತು ಬಳಸಿಕೊಂಡು ಹೋಗಿ ಸುಸ್ತಾಗುವ ಸನ್ನಿವೇಶ ನಿರ್ಮಾಣವಾಗಿದೆ.
ಸುಮಾರು ಎರಡೂವರೆ ಕಿಮೀ ಸಂಪರ್ಕ ರಸ್ತೆಯ ಪ್ರದೇಶದಲ್ಲಿ 200ಕ್ಕೂ ಹೆಚ್ಚಿನ ಮನೆಗಳಿವೆ. ಈ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿಗೊಂಡಲ್ಲಿ ಕಂಪ-ಮುಂಡೂರಿಗೆ ಹಾಗೂ ತಿಂಗಳಾಡಿ ಕಡೆಗೆ ತೆರಳುವವರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದು ಈ ಪ್ರದೇಶಗಳಿಗೆ ನೇರ ಸಂಪರ್ಕದ ರಸ್ತೆಯೂ ಆಗಿದೆ. ಪ್ರಸ್ತುತ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಈ ಭಾಗದ ಜನತೆ ಪುರುಷರಕಟ್ಟೆ-ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆ ಬಳಿಯಿಂದಾಗಿ ಪಂಜಳ-ಕಂಪ ಮೂಲಕವಾಗಿ ಸುಮಾರು 4 ಕಿ.ಮೀ.ಯಷ್ಟು ಸುತ್ತು ಬಳಸಿಕೊಂಡು ಮುಂಡೂರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಹಿಂದೆ ಶಾಸಕರಾಗಿದ್ದ ಸಂಜೀವ ಮಠಂದೂರು ಅವರಿಗೆ ಎರಡು ಬಾರಿ ಮನವಿ ಮಾಡಿದ್ದೆವು. ಶಾಸಕ ಅಶೋಕ್‌ಕುಮಾರ್ ರೈ ಅವರಿಗೆ ಮಾಹಿತಿ ನೀಡಿದ್ದೇವೆ. ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿ ಮಳೆ ಕಡಿಮೆಯಾದ ಬಳಿಕ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈ ಸಂಪರ್ಕ ರಸ್ತೆಯ ಎರಡು ಕಡೆಗಳಲ್ಲಿ ವರ್ಗಾಸ್ಥಳದ ಸಮಸ್ಯೆಯೂ ಇದ್ದು, ಇದನ್ನು ಪರಿಹರಿಸುವ ಕೆಲಸವೂ ಆಗಬೇಕಿದೆ. - ಪ್ರವೀಣ್ ಆಚಾರ್ಯ ನರಿಮೊಗರು,ಸಾಮಾಜಿಕ ಕಾರ್ಯಕರ್ತ