ಅಳವಂಡಿ: ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಇದನ್ನು ಸದ್ಬಳಸಿಕೊಂಡು ಎಲ್ಲರೂ ವಿದ್ಯಾವಂತರಾಗಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ ಚಿಲವಾಡಗಿ ತಿಳಿಸಿದರು.
ಇದನ್ನೂ ಓದಿ: ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಲಿಕೆ ಟಾಟಾ ಟ್ರಸ್ಟ್‌ನಿಂದ ಆಯೋಜಿಸ್ದಿ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಪಾಲಕರು ಮಕ್ಕಳಿಗೆ ಶಿಕ್ಷಣವೆಂಬ ಆಸ್ತಿ ನೀಡಿ. ಬಾಹ್ಯ ಆಸ್ತಿ ನಾಶವಾಗಬಹುದು ಶಿಕ್ಷಣವಲ್ಲ. ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಣ ಮಟ್ಟವನ್ನು ಸುಧಾರಿಸಲು ಸರ್ಕಾರ ಹಲವಾರು ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಲಾಭ ಮಕ್ಕಳಿಗೆ ತಲುಪಿ ವಿದ್ಯಾವಂತರಾಗಬೇಕು. ಜೀವನ ನಡೆಸಲು ಶಿಕ್ಷಣ ತಾಯಿ ಬೇರು ಇದ್ದ ಹಾಗೆ. ಶಾಲಾಭಿವೃದ್ಧಿಗೆ ಸರ್ವ ಸದಸ್ಯರು ಶ್ರಮಿಸಬೇಕು ಎಂದರು.
ಶಿಕ್ಷಣ ಪ್ರೇಮಿ ಭರಮಪ್ಪ ನಗರ ಮಾತನಾಡಿ, ಪಾಲಕರು, ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳ ಶಿಕ್ಷಣ ಪ್ರಗತಿ ಹೊಂದಬೇಕಾದರೆ ಪ್ರತಿಯೊಬ್ಬರ ಸಹಕಾರ ಅವಶ್ಯ. ಜತೆಗೆ ಮಕ್ಕಳ ಓದಿಗೆ ಬೇಕಾದ ಪೂರಕ ವಾತಾವರಣ ನಿರ್ಮಿಸಬೇಕಾಗಿದೆ. ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು ಎಂದರು.
ಶಾಲೆಯನ್ನು ತಳಿರು, ತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಮಕ್ಕಳು ಮಹಾನೀಯರ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು.
ಟಾಟಾ ಟ್ರಸ್ಟ್‌ನ ಸಂಚಾಲಕ ಮಂಜುನಾಥ ಮೌನೇಶ, ಮುಖ್ಯಶಿಕ್ಷಕಿ ಸಾವಿತ್ರಿ, ಪ್ರಮುಖರಾದ ತೋಟಪ್ಪ ಶಿಂಟ್ರ, ನಿಂಗನಗೌಡ ಪಾಟೀಲ್, ಈರಪ್ಪ ಮೇಟಿ, ಯಮನೂರಪ್ಪ ಶಿಂಟ್ರ, ಹನುಮಗೌಡ, ಗೊರಪ್ಪ, ಲಕ್ಕಪ್ಪ, ಗವಿಸಿದ್ದಪ್ಪ, ಕರಿಯಪ್ಪ ಇತರರಿದ್ದರು.