ಜಿಲ್ಲೆ

ಕರೊನಾ ಗಾಯಕ್ಕೆ ಸಾಂಕ್ರಾಮಿಕ ಬರೆ: ಡೆಂಘ, ಚಿಕೂನ್​ಗುನ್ಯಾ, ಎಚ್1ಎನ್1 ಭೀತಿ

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕರೊನಾ ಆರ್ಭಟ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಮುಂಗಾರು ಚುರುಕುಗೊಂಡ ಬಳಿಕ ಸಾಂಕ್ರಾಮಿಕ ರೋಗಗಳ ಭೀತಿ ಕಾಡಲಾರಂಭಿಸಿದೆ. ಶುಕ್ರವಾರ ಒಂದೇ ದಿನ ಕರೊನಾಗೆ ಏಳು ಜನರು ಮೃತಪಟ್ಟು, ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾದರೆ, ಈಗಾಗಲೇ ಮೂವರು ಎಚ್1ಎನ್1ಗೆ ಬಲಿ ಯಾಗಿದ್ದಾರೆ. ಚಿಕೂನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಉಲ್ಬಣದ ಆತಂಕ ಹೆಚ್ಚಿರುವು ದರಿಂದ ಜನ ಮೈಮರೆತರೆ ಅಪಾಯ ನಿಶ್ಚಿತ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಲಾಕ್​ಡೌನ್ ಸಂದರ್ಭದಲ್ಲಿ ಕರೊನಾ ಸೇರಿದಂತೆ ಬಹುತೇಕ ಸಾಂಕ್ರಾಮಿಕ ರೋಗಗಳು ನಿಯಂತ್ರಣದಲ್ಲಿದ್ದವು. ಆದರೆ ಲಾಕ್​ಡೌನ್ ನಿಯಮಗಳು ಸಡಿಲಗೊಳ್ಳುತ್ತಿದ್ದಂತೆಯೇ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಮತ್ತೊಂದೆಡೆ ಆರೋಗ್ಯಕರ ನಿಯಮ ಪಾಲನೆಯ ಬಗ್ಗೆ ಜನರೂ ನಿರ್ಲಕ್ಷ್ಯ ತಾಳಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಮಾಸ್ಕ್ ಧರಿಸದ, ಸ್ವಚ್ಚತೆಗೆ ಆದ್ಯತೆ ನೀಡದ ಕಾರಣಕ್ಕಾಗಿ ಕರೊನಾ ಜತೆಗೆ ಇತರ ಸೋಂಕುಗಳೂ ಬಾಧಿಸಲಿವೆ ಎನ್ನುತ್ತಾರೆ ತಜ್ಞರು.

ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಅಪಾರ ಪ್ರಮಾಣದಲ್ಲಿ ಹಾಸಿಗೆ ಕಾಯ್ದಿರಿಸಿರುವುದರಿಂದ ಅನ್ಯ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗಗಳೂ ಉಲ್ಬಣಿಸಿದರೆ ಚಿಕಿತ್ಸೆ ಪಡೆಯುವುದು ತೀರಾ ಕಷ್ಟವಾಗುತ್ತದೆ.

ಹೀಗಾಗಿ ಜನರಷ್ಟೇ ಮುನ್ನೆಚ್ಚರಿಕೆ ವಹಿಸುವುದರೆ ಸಾಲದು, ಎಲ್ಲ ರೋಗಗಳಿಗೂ ಅಗತ್ಯ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರವೂ ಸಜ್ಜಾಗಬೇಕಿದೆ. ರಾಜ್ಯದಲ್ಲಿ ಈವರೆಗೆ ಡೆಂಘ, ಚಿಕೂನ್ ಗುನ್ಯಾ, ಮಲೇರಿಯಾ, ಜಪಾನಿಸ್ ಎನ್​ಸೆಫಲೈಟಿಸ್ (ಮಿದುಳು ಜ್ವರ), ಅಕ್ಯೂಟ್ ಎನ್​ಸೆಫಲೈಟಿಸ್ ಸಿಂಡ್ರೋಮ್ ಫೈಲೇರಿಯಾ ಪ್ರಕರಣಗಳು ವರದಿಯಾಗಿವೆ. ಫೈಲೇರಿಯಾ ರೋಗ ಹೊರತುಪಡಿಸಿ, ಉಳಿದೆಲ್ಲ ಜ್ವರಗಳ ರೋಗ ಲಕ್ಷಣಗಳಲ್ಲಿ ಸಾಮ್ಯತೆ ಇದೆ. ನೆಗಡಿ, ತಲೆನೋವು, ಮೈ-ಕೈ ನೋವು ಕಾಣಿಸಿಕೊಂಡವರಿಗೆ ಯಾವ ರೋಗವೆಂದು ಆತಂಕ ಸೃಷ್ಟಿಯಾಗುತ್ತಿದೆ.

ವೈದ್ಯರಿಗೂ ಗೊಂದಲ: ಸಾಂಕ್ರಾಮಿಕ ರೋಗಗಳು ಜನರಲ್ಲಿ ಭೀತಿ ಹೆಚ್ಚಿಸಿದ್ದರೆ, ವೈದ್ಯರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಕಾರಣ ಬಹುತೇಕ ರೋಗಗಳ ಲಕ್ಷಣಗಳು ಒಂದೇ ರೀತಿ ಇರುತ್ತದೆ. ಇದರಿಂದ ಯಾವ ಸಮಸ್ಯೆಯಿಂದ ರೋಗಿ ಬಳಲುತ್ತಿದ್ದಾನೆ ಎಂಬುದನ್ನು ಅರಿತು ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಲಿದೆ. ಹೀಗಾಗಿ ಪ್ರತಿಯೊಂದಕ್ಕೂ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ.

ಎಚ್ಚರಿಕೆ ಕ್ರಮಗಳು

* ಯಾವುದೇ ರೀತಿಯ ಜ್ವರ ಕಾಣಿಸಿಕೊಂಡ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಿರಿ

* ಹಗಲು, ರಾತ್ರಿ ಯಾವುದೇ ಹೊತ್ತಿನಲ್ಲೂ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ

* ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ

* ನೀರು ಶೇಖರಣಾ ತೊಟ್ಟಿ, ಟ್ಯಾಂಕ್​ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ

* ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ

* ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ

* ರೋಗನಿರೋಧಕ ಶಕ್ತಿ ಕುಂದದಂತೆ ಸಮತೋಲಿತ ಆಹಾರ, ಶುದ್ಧ ನೀರು ಸೇವಿಸಿ

* ಶೌಚಗೃಹಕ್ಕೆ ಹೋದರೆ ತಪ್ಪದೇ ಕೈಗಳನ್ನು ಸೋಪಿನಲ್ಲಿ ತೊಳೆಯಬೇಕು

* ಕೆಮ್ಮುವಾಗ, ಸೀನುವಾಗ ಕರವಸ್ತ್ರ (ಕಡ್ಡಾಯವಾಗಿ ಮಾಸ್ಕ್ ಬಳಸಿ) ಅಡ್ಡವಿಟ್ಟುಕೊಳ್ಳಿ

* ಹೊರಗಿನಿಂದ ಮನೆಗೆ ಹೋದ ನಂತರ ತಪ್ಪದೇ ಸ್ನಾನ ಮಾಡಿ

* ಹೋಟೆಲ್​ನಲ್ಲಿ ಆಹಾರ ಸೇವಿಸುವಾಗ ಎಚ್ಚರವಹಿಸಿ

* ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಹಾಗೂ ಸ್ಯಾನಿಟೈಸರ್ ಇರಲಿ

ಮಿದುಳು ಜ್ವರದ ಲಕ್ಷಣ

ಜ್ವರ, ತಲೆನೋವು, ವಾಂತಿ, ಕತ್ತು ಗಡುಸಾಗುವುದು, ಜೋಂಪು ಹತ್ತುವುದು. ಗಂಭೀರ ಹಂತದಲ್ಲಿ 103 ಡಿಗ್ರಿ ಫ್ಯಾರನ್​ಹೀಟ್​ಗಿಂತ ಅಧಿಕ ಜ್ವರ, ಗೊಂದಲ, ಭ್ರಮಾತ್ಮಕ ಸ್ಥಿತಿ, ಚಲನೆಯಲ್ಲಿ ನಿಧಾನ, ದೇಹ ತಟಸ್ಥವಾಗುವಿಕೆ, ಕಿರಿಕಿರಿ, ಬೆಳಕನ್ನು ನೋಡಲಾಗದಿರುವಿಕೆ, ಮೂರ್ಛೆ, ಕೋಮಾ. ರೋಗ ಲಕ್ಷಣ. (ಮಕ್ಕಳಲ್ಲಿ ವಾಂತಿ, ತಲೆಯ ಮೆತ್ತಗಿನ ಭಾಗಗಳು ಊದಿಕೊಳ್ಳುವುದು, ನಿರಂತರ ಅಳು, ದೇಹ ಗಡುಸಾಗುವುದು)

ರೋಗ ಲಕ್ಷಣಗಳು

# ವೈರಲ್ ಫೀವರ್: ನೆಗಡಿ, ತಲೆನೋವು, ಕೆಮ್ಮು, ಮೈ-ಕೈ ನೋವು, ಕೆಲವೊಮ್ಮೆ ವಾಂತಿ-ಭೇದಿ

# ಡೆಂಘ: ದಿಢೀರ್ ಜ್ವರ,. ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ -ಕೈ ನೋವು, ಅತಿಸಾರ ಆರಂಭಿಕ ಲಕ್ಷಣಗಳು. ಗಂಭೀರ ಹಂತ ತಲುಪಿದಾಗ ಕರುಳಿನಲ್ಲಿ ರಕ್ತಸ್ರಾವ, ಮೈಮೇಲೆ ಕೆಂಪು ಬರೆ.

# ಚಿಕೂನ್ ಗುನ್ಯಾ: ವಿಪರೀತ ಮೈ-ಕೈ ನೋವು, ತಲೆ ಸಿಡಿತ, ಮಂಡಿ, ಮೊಣಕೈ, ಮುಂಗೈಗಳಲ್ಲಿ ನೋವು

# ಎಚ್1ಎನ್1: ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆ, ಕಣ್ಣು ಕೆಂಪಾಗುವುದು, ತೀವ್ರವಾದ ಮೈ-ಕೈ ನೋವು, ತಲೆ ನೋವು.

ಈಗಾಗಲೇ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸಾಂಕ್ರಾಮಿಕ ರೋಗ ಉಲ್ಬಣಿಸಿದರೆ ಚಿಕಿತ್ಸೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಮುಂಜಾಗ್ರತೆ ವಹಿಸಿ ರೋಗಗಳಿಂದ ದೂರವಿರಿ. | ಡಾ. ನಿಜಗುಣ ಮಕ್ಕಳ ತಜ್ಞ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ

| ಪಂಕಜ ಕೆ.ಎಂ.