ಮನೋಹರ್ ಬಳಂಜ ಬೆಳ್ತಂಗಡಿ
ಬೇಸಿಗೆ ಮಳೆ ಕಾಲಿಡುತ್ತಿದ್ದಂತೆ ಬೆಳ್ತಂಗಡಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದ್ದು, ಶಂಕಿತ ಡೆಂಘೆ ಪ್ರಕರಣಗಳು ವರದಿಯಾಗಿವೆ.
ಬೇಸಿಗೆ ಮಳೆಯ ವಾತಾವರಣ ಸಾಂಕ್ರಾಮಿಕ ರೋಗಗಳಿಗೆ ರಹದಾರಿ. ಕೃಷಿ ತೋಟಗಳಲ್ಲಿ ಸಂಗ್ರಹವಾಗುವ ನೀರು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಚರಂಡಿ ನಿರ್ಮಾಣ ಜಾಗದಲ್ಲಿ ಮಳೆ ನೀರು ನಿಂತಿರುವುದು, ಪೇಟೆಯ ಚರಂಡಿಗಳಿಗೆ ಗಲೀಜು ನೀರು ಬಿಡುವುದು, ಹೂಕುಂಡಗಳಲ್ಲಿ ನೀರು ಸಂಗ್ರಹ, ಕೆರೆಗಳ ಪರಿಸರಕ್ಕೆ ತ್ಯಾಜ್ಯ ತಂದು ಹಾಕುವುದು, ಪೇಟೆ ಪ್ರದೇಶಗಳಲ್ಲಿ ತ್ಯಾಜ್ಯದ ರಾಶಿಯಲ್ಲಿ ನೀರು ತುಂಬುವುದು ಇತ್ಯಾದಿ ಲಾರ್ವ ಉತ್ಪತ್ತಿಗೆ ಕಾರಣವಾಗುತ್ತಿದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿದೆ. ಪರಿಸರ ಸ್ವಚ್ಛತೆಯ ಕಾಳಜಿ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಸ್ವಚ್ಛತೆ ಅರಿವಿನ ಕೊರತೆ
ಆರೋಗ್ಯ ಇಲಾಖೆ, ಸ್ಥಳೀಯ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಅಲ್ಲಿ ಸೂಕ್ತ ಕ್ರಮ ಅನುಸರಿಸಲಾಗುತ್ತಿದೆ. ಸ್ವಚ್ಛತೆ ಬಗ್ಗೆ ಇನ್ನೂ ಅರಿವು ಮೂಡದ ಅನೇಕರು ಈ ಕ್ರಮಗಳನ್ನು ಅನುಸರಿಸದಿರುವುದು ರೋಗ ಭೀತಿಗೆ ಕಾರಣವಾಗುತ್ತಿದೆ.
ತಾಲೂಕಿನ ಅಲ್ಲಲ್ಲಿ ಜ್ವರ
ತಾಲೂಕಿನ ಅಲ್ಲಲ್ಲಿ ಇತ್ತೀಚಿನ ದಿನಗಳಲ್ಲಿ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ವೈರಲ್ ಜ್ವರದ ಲಕ್ಷಣದೊಂದಿಗೆ ಆರಂಭವಾಗಿ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಇದು ಡೆಂಘೆ, ಮಲೇರಿಯಾಕ್ಕೂ ಕಾರಣವಾಗಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಕ್ಲಿನಿಕ್‌ಗಳಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಿದೆ. ಶಂಕಿತ ಡೆಂಘೆ ಪ್ರಕರಣಗಳು ಅಧಿಕಗೊಂಡಿದ್ದು, ಹಲವರು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಪ್ಲೇಟ್ಲೆಟ್ ತೀವ್ರ ಕಡಿಮೆಯಾಗಿ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಕಂಡುಬಂದಿದೆ.
ಮೂಲಾರು ಪರಿಸರದಲ್ಲಿ ತಪಾಸಣೆ
ಮುಂಡಾಜೆ, ಕಲ್ಮಂಜ ಗ್ರಾಮದ ಗಡಿ ಪ್ರದೇಶವಾದ ಮೂಲಾರು ಪರಿಸರದಲ್ಲಿ ಹೆಚ್ಚಿನ ಶಂಕಿತ ಡೆಂಘೆ ಪ್ರಕರಣಗಳು ಕಂಡುಬಂದಿದ್ದು, ಶನಿವಾರ ಆರೋಗ್ಯ ಇಲಾಖೆ ಮತ್ತು ಪಂಚಾಯಿತಿ ವತಿಯಿಂದ ಪರಿಸರದ ಮನೆಗಳಿಗೆ ತೆರಳಿ ತಪಾಸಣೆ, ಪರಿಶೀಲನೆ ನಡೆಸಲಾಯಿತು. ಈ ಪ್ರದೇಶದಲ್ಲಿ 20ಕ್ಕಿಂತ ಅಧಿಕ ಮನೆಗಳಿದ್ದು, 8 ಮನೆಗಳು ಕಲ್ಮಂಜ ಗ್ರಾಪಂ ವ್ಯಾಪ್ತಿಯಲ್ಲಿ, 12 ಮನೆಗಳು ಮುಂಡಾಜೆ ಗ್ರಾಪಂ ವ್ಯಾಪ್ತಿಯಲ್ಲಿವೆ. ಇಲ್ಲಿ 15ರಷ್ಟು ಶಂಕಿತ ಡೆಂಘೆ ಪ್ರಕರಣಗಳು ಕಂಡುಬಂದಿವೆ.
ತಕ್ಷಣ ಸೂಕ್ತ ಚಿಕಿತ್ಸೆ ಅವಶ್ಯ
ಲಾರ್ವ ಉತ್ಪತ್ತಿಯಾಗದಂತೆ ಪರಿಸರ ಸ್ವಚ್ಛತೆ ಅಗತ್ಯ. ರೋಗಲಕ್ಷಣ ಉಳ್ಳವರು ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು. ರಬ್ಬರ್, ಅಡಕೆ ತೋಟಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಫಾಗಿಂಗ್ ನಡೆಸಬೇಕು. ಸೊಳ್ಳೆಗಳು ಕಡಿಯದಂತೆ ಮುಂಜಾಗ್ರತೆ ವಹಿಸಬೇಕು.
ತಾಲೂಕಿನಲ್ಲಿ ಜನವರಿಯಿಂದ ಇದುವರೆಗೆ 5 ಸೋಂಕಿತ ಡೆಂಘೆ ಪ್ರಕರಣಗಳು ಕಂಡುಬಂದಿದ್ದು, ಎಲ್ಲ ರೋಗಿಗಳು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ ಅಲ್ಲಲ್ಲಿ ಶಂಕಿತ ಪ್ರಕರಣಗಳು ವರದಿಯಾಗಿವೆ. ಜ್ವರದಿಂದ ಬಳಲುತ್ತಿರುವವರು ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಡಾ.ಸಂಜಾತ್ ಬೆಳ್ತಂಗಡಿ ಟಿಎಚ್‌ಒ ನಮ್ಮ ಗ್ರಾಮದಲ್ಲಿ ಶಂಕಿತ ಡೆಂಘೆ ಪ್ರಕರಣಗಳು ಕಂಡುಬಂದಿದ್ದು, ಸಂತ್ರಸ್ತ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಮೀಪದ ಪಂಚಾಯಿತಿಗಳ ಸಹಕಾರದಲ್ಲಿ ಫಾಗಿಂಗ್ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಗಣೇಶ ಬಂಗೇರ ಮುಂಡಾಜೆ ಗ್ರಾಪಂ ಅಧ್ಯಕ್ಷ ನಮ್ಮ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಅನೇಕರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಇದರಲ್ಲಿ ಹೆಚ್ಚಿನವರಲ್ಲಿ ಶಂಕಿತ ಡೆಂಘೆ ಕಂಡು ಬಂದಿದೆ. ಅವರೆಲ್ಲ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಪರಿಸರದಲ್ಲಿ ಡೆಂಘೆ ಇನ್ನಷ್ಟು ಹರಡುವ ಭೀತಿ ನಿರ್ಮಾಣವಾಗಿದೆ. ಲತಾ ಪುರುಷೋತ್ತಮ್ ಮೂಲಾರು, ಗೃಹಿಣಿ