Mukyamantri Chandru: ದಾನಗಳಲ್ಲಿ ಮತದಾನವೇ ಶ್ರೇಷ್ಠದಾನವಾಗಿದ್ದು, ಐದು ವರ್ಷಗಳ ಅಧಿಕಾರಾವಧಿಯ ಶಾಸನಸಭೆಗಳಿಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ ಎಂದು ಮಂಗಳವಾರ ಮೈಸೂರಿನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು.
ದಾರಿ ಫೌಂಡೇಶನ್ ಮೈಸೂರು ವತಿಯಿಂದ ನಗರದ ಶಾರದಾ ವಿಲಾಸ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿ’ ಮುಕ್ತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಯುವಕರು ಚಿಂತನೆ ಮಾಡುತ್ತಿದ್ದು, ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ. ಹಾಗೆಯೇ ಬದುಕಿಗೆ ಉದ್ಯೋಗ ಪಡೆಯುವ ಜೊತೆಗೆ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಬೇಕು. ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು ದೇಶದ ಭವಿಷ್ಯ ರೂಪಿಸಲು ಸ್ವಲ್ಪ ಆಲೋಚಿಸಬೇಕು. ಮುಖ್ಯವಾಗಿ ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವ ರಕ್ಷಿಸಲು ಉತ್ತಮ ಜನ ಪ್ರತಿನಿಧಿ ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಪ್ರತಿನಿಧಿ ಐದು ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಮಾಡುತ್ತಾನೆ. ಭ್ರಷ್ಟಾಚಾರ ಮಾಡುತ್ತಾನಾ? ಎಂಬುದನ್ನು ತಿಳಿದು ಮತ ನೀಡಬೇಕು. ಉತ್ತಮರನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ಬಹಳ ಮುಖ್ಯ. ಈ ಮೂರು ಅಂಗಗಳ ಜತೆಗೆ ಪತ್ರಿಕಾ ರಂಗವೂ ಮುಖ್ಯ. ಆದರೆ ಇಂದು ಸಮಾಜ ಕೆಡಲು ಈ ಎಲ್ಲ ಅಂಗಗಳು ಕಾರಣ ಆಗಿವೆ. ರಾಜಕಾರಣದಲ್ಲಿ ಧರ್ಮ ಇರಬೇಕು ಹೊರೆತು ಧರ್ಮವೇ ರಾಜಕಾರಣ ಆಗಬಾರದು. ಇಂದು ಧರ್ಮಸ್ಥಳ ವಿಚಾರದಲ್ಲಿ ಅದೇ ಆಗಿದೆ. ಧರ್ಮಸ್ಥಳದ ಪ್ರಕರಣವನ್ನು ಸಂಪೂರ್ಣ ವೈಭವಿಕರಿಸಲಾಗಿದೆ ಎಂದರು.
ಮಕ್ಕಳು ಬರುತ್ತಿಲ್ಲ ಎಂದು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದಕ್ಕೆ ಮಕ್ಕಳು, ಪೋಷಕರು ಕಾರಣನಾ? ಸರ್ಕಾರ ಶಾಲೆಗಳಲ್ಲಿ ಸರಿಯಾದ ಸೌಲಭ್ಯ ನೀಡದ ಕಾರಣ ಮಕ್ಕಳು ಬರುತ್ತಿಲ್ಲ. ಇದಕ್ಕೆ ಸರ್ಕಾರವೇ ಕಾರಣ ಎಂದು ದೂರಿದರು. ಪ್ರಪಂಚದಲ್ಲೇ ಅತಿ ದೊಡ್ಡ ಸಂವಿಧಾನ, ವಿವಿಧತೆಯಲ್ಲಿ ಏಕತೆ ಇರುವ ದೇಶ ನಮ್ಮದು. ಅನೇಕ ಧರ್ಮ, ಜಾತಿ, ಸಂಪ್ರದಾಯ, ಭಾಷೆ ಬೇಧ ರೀತಿಯ ಅನೇಕ ಸಮಸ್ಯೆಗಳಿದ್ದರು ಎಲ್ಲವನ್ನು ಒಳಗೊಂಡು ಬದುಕುತ್ತಿದ್ದೇವೆ. ನಮ್ಮ ಒಕ್ಕೂಟ ವ್ಯವಸ್ಥೆ ಉತ್ತಮ ಚೌಕಟ್ಟಿನಲ್ಲಿ ನಡೆಸಲು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ತಂಡ ಸಂವಿಧಾನ ನೀಡಿದ್ದಾರೆ. ಸಮಾಜವನ್ನು ಕಾಪಾಡಿದರೆ ದೇಶವನ್ನು ಉಳಿಸಿದಂತೆ, ದೇಶವನ್ನು ಉಳಿಸಿದಾಗ ಸಂವಿಧಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುಲು ಸಾಧ್ಯ ಪ್ರತಿಪಾದಿಸಿರು.
ಪ್ರಪಂಚದಲ್ಲೇ ಮದ್ಯ ಅನ್ನುವುದು ಕೆಟ್ಟದು. ಅದನ್ನು ತಡೆಯಲು ಸರ್ಕಾರ ಒಂದು ಮಂಡಳಿ ಸ್ಥಾಪಿಸಿದೆ. ಆದರೆ, ಅದೇ ಸರ್ಕಾರ ಮತ್ತೊಂದು ಇಲಾಖೆಯಿಂದ ಮದ್ಯ ಮಾರಾಟ ಮಾಡಿಸುತ್ತಿದೆ. ಇದು ಪ್ರಜಾಪ್ರಭುತ್ವದ ವಿಪರ್ಯಾಸ. ಸಮಾಜವಾದ ಎಂದರೆ ಕಟ್ಟಕಡೆ ಮನುಷ್ಯರು ಅಭಿವೃದ್ಧಿ ಆಗಬೇಕು. ಆದರೀಗ ಬಡವರ ಮಕ್ಕಳು ಡಾಕ್ಟರ್, ಇಂಜಿನಿಯರ್, ಲಾಯರ್ ಆಗಲು ಸಾಧ್ಯನಾ? ಅವರಿಗೆ ಅಪಾರ ಜ್ಞಾನ ಇದ್ದರೂ ಶಿಕ್ಷಣ ಸಂಸ್ಥೆಗಳಿಗೆ ಹಣ ಕಟ್ಟಲು ಆಗುತ್ತಿಲ್ಲ. ಇಂತಹ ವ್ಯವಸ್ಥೆಯನ್ನು ಎಲ್ಲಿಂದ ಸರಿಪಡಿಸಬೇಕು ಎಂದು ಯುವಕರು ಯೋಚಿಸಬೇಕು ಎಂದರು.
ಹಿಂದೆ ರಾಜರು ಅರಮನೆಯಲ್ಲಿ ಹುಟ್ಟಿ ಅನೇಕ ಅಭಿವೃದ್ಧಿ ಮಾಡಿದರು. ಆದರೆ, ಇದೀಗ ಅರಮನೆಗಳನ್ನು ಕಟ್ಟಿಕೊಳ್ಳಲು ಮುಖ್ಯಮಂತ್ರಿ, ಮಂತ್ರಿ, ಶಾಸಕ, ಸಂಸದರು ಆಗುತ್ತಿದ್ದಾರೆ. ಶಾಸಕಾಂಗದ ಜವಾಬ್ದಾರಿ ಏನು? ಗಣಿ ಲೂಟಿಯಿಂದ 35 ಕೋಟಿ ರೂ. ಕಿರಿಟವನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿದವರು ಶಾಸಕರಾಗುತ್ತಿದ್ದಾರೆ. ಹತ್ತಾರು ಕೊಲೆ ಮಾಡಿದವರು ಮುಖ್ಯಮಂತ್ರಿ ಆಗಬಹುದು. ನಮ್ಮ ದೇಶ ಎಲ್ಲಿಗೆ ಬಂದಿದೆ ಎಂದು ಯುವಕರು ಚಿಂತನೆ ಮಾಡಬೇಕು ಹೇಳಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಪ್ರಧಾನ ಭಾಷಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಾಂಶುಪಾಲರಾದ ಡಾ.ಎಂ.ದೇವಿಕಾ, ನವೀನ್, ಮಹೇಶ್, ದಾರಿ ಫೌಂಡೇಶನ್‌ನ ಪದಾಧಿಕಾರಿಗಳಾದ ಸಕಲೇಶ್ಪುರ ಗುಂಡಪ್ಪ, ಸೀತಾರಾಮ್, ರವಿಕುಮಾರ್, ವಿರೇಶ್ ಕುಮಾರ್ ಇತರರಿದ್ದರು.