ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ಪೊಲೀಸ್ ಠಾಣೆ ಪಟ್ಟಣದಿಂದ ಬಹುದೂರ ಕಾಡಿನ ಮಧ್ಯೆಯಿದ್ದು, ಠಾಣೆಗೆ ಹೋಗುವ ರಸ್ತೆಗೆ ದಾರಿದೀಪ ಅಳವಡಿಸಬೇಕು. ಠಾಣೆ ದೂರದಲ್ಲಿದ್ದು, ಜನತೆಯ ಅನುಕೂಲಕ್ಕಾಗಿ ಹೆಬ್ರಿ ಪಟ್ಟಣದಲ್ಲಿ ಪೊಲೀಸ್ ಔಟ್ ಪೋಸ್ಟ್ ತೆರೆಯುವಂತೆ ಹೆಬ್ರಿ ಕಾರ್ಕಳ ತಾಲೂಕು ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಮನವಿ ಮಾಡಿದರು.
ಉಡುಪಿ ಲೋಕಾಯುಕ್ತ ಪೊಲೀಸ್ ವತಿಯಿಂದ ಗುರುವಾರ ಹೆಬ್ರಿ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲಿನಲ್ಲಿ ಒತ್ತಾಯಿಸಿದರು.
ಸರ್ಕಾರಿ ಸೇವೆಗಳಿಗಾಗಿ ಬರುವ ಸಾರ್ವಜನಿಕರ ಕಡತಗಳನ್ನು ವಿಲೇವಾರಿ ಮಾಡಲು ವಿಳಂಬ ಮಾಡಬೇಡಿ. ತ್ವರಿತವಾಗಿ ಜನರ ಸೇವೆ ಮಾಡಿ. ನಾವು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಎಸ್.ಪಿ.ನಟರಾಜ್ ಸೂಚಿಸಿದರು.
ರಸ್ತೆಯಲ್ಲಿರುವ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಿ ಅವಘಡ ಸಂಭವಿಸದಂತೆ ಎಚ್ಚರ ವಹಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಕೆಸಿ ಸೂಚಿಸಿದರು. ಪ್ರಾಣಕ್ಕೆ ಕುತ್ತು ತರುವ ರಸ್ತೆಯಂಚಿನಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ ಶೀಘ್ರವಾಗಿ ಅರಣ್ಯ ಇಲಾಖೆಯವರು ಸರ್ವೇ ನಡೆಸಿ ಮರಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆಜಿ, ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಲೋಕಾಯುಕ್ತಕ್ಕೆ ಸಂಬಂಧಿಸಿದ ಪ್ರತಿಯೊಂದು ನೋಟಿಸ್‌ಗಳನ್ನು ತಮ್ಮ ಇಲಾಖೆ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಕೆಲವರು ಮೀಟಿಂಗ್ ಎಂದು ಹೋಗುತ್ತಾರೆ. ಮೂವ್ಮೆಂಟ್ ರಿಜಿಸ್ಟರ್ ಅಲ್ಲಿ ಬರೆದಿರುವುದಿಲ್ಲ. ರಜೆ ಹಾಕಿದ್ದರೂ ದಾಖಲೆ ಇರುವುದಿಲ್ಲ. ಮೇಲಧಿಕಾರಿಗಳು ಸಂಸ್ಥೆಗೆ ಸಂಬಂಧಿಸಿದ ಎಲ್ಲ ಮೂಲಸೌಕರ್ಯಗಳನ್ನು ಶಿಸ್ತುಬದ್ಧವಾಗಿ ಇಟ್ಟುಕೊಂಡು ಕಾಪಾಡಿಕೊಳ್ಳಬೇಕು. ಇದಲ್ಲದಕ್ಕೆ ಅಧಿಕಾರಿಗಳು ಹೊಣೆಯಾಗಿರುತ್ತಾರೆ. ಇಲ್ಲದಿದ್ದಲ್ಲಿ ನಮ್ಮ ಭೇಟಿಯ ವೇಳೆ ಕರ್ತವ್ಯ ಲೋಪವೆಂದು ಪರಿಗಣಿಸುತ್ತೇವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ತಿಳಿಸಿದರು.
ಹೆಬ್ರಿಯ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕು. ಬಹುತೇಕರು ಶಕ್ತಿ ಯೋಜನೆ ಫಲಾನುಭವಿಗಳಲ್ಲ, ಶಾಲಾ ಕಾಲೇಜು ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದು ಹುತ್ತುರ್ಕೆ ಸದಾಶಿವ ಪ್ರಭು ಮನವಿ ಮಾಡಿದರು.