ಜಿಲ್ಲೆ

ಶಾಲಾ ಹಂತದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಲು ಆಗ್ರಹ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕೆಲ ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆ(ಐ-ಪಿಲ್), ಲೈಟರ್‌, ಸಿಗರೇಟ್‌ಗಳು, ವೈಟ್‌ನರ್‌ಗಳು, ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವ ಆಘಾತಕಾರಿ ಸಂಗತಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ತರಗತಿಗೆ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ತರುತ್ತಿದ್ದಾರೆ ಎಂದು ಶಿಕ್ಷಕರ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಹಾಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಶಿಕ್ಷಕರು ಚೆಕ್ ಮಾಡಿದಾಗ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್‌, ವೈಟ್‌ನರ್‌ಗಳು ಪತ್ತೆಯಾಗಿದ್ದು, ಶಿಕ್ಷಕರು ಮಾತ್ರವಲ್ಲ, ಈ ವಿಷಯ ತಿಳಿದ ಪಾಲಕರೂ ಶಾಕ್​ ಆಗಿದ್ದಾರೆ.

ಇಂತಹ ಆಘಾತಕಾರಿ ವಿಷಯ ಪ್ರತಿ ಪಾಲಕರಲ್ಲೂ ಆತಂಕ ಹುಟ್ಟಿಸಿದೆ. ಇದರ ಬೆನ್ನಲ್ಲೇ ಮಕ್ಕಳಿಗೆ ಶಾಲಾ ಹಂತದಲ್ಲೇ ಲೈಂಗಿಕ ಶಿಕ್ಷಣ ಆರಂಭಿಸುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಒಳ್ಳೆಯದು ಕೆಟ್ಟದನ್ನು ತಿಳಿಸಿ ಯಾವುದರಿಂದ ದೂರ ಇರಬೇಕೆಂದು ತಿಳಿವಳಿಕೆ ಮೂಡಿಸಲು ಶಾಲಾ ಹಂತದಲ್ಲೇ ಲೈಂಗಿಕ ಶಿಕ್ಷಣ ಆರಂಭಿಸುವ ಅಗತ್ಯವಿದೆ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್​, ರಾಜ್ಯ ಖಾಸಗಿ ಶಾಲಾ ಪೋಷಕ ಸಂಘಟನೆಗಳ ಸಮನ್ವಯ ವೇದಿಕೆ ಹಾಗೂ ಹಲವು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಹಲವು ದೇಶಗಳಲ್ಲಿ ಲೈಂಗಿಕ ಶಿಕ್ಷಣ ಜಾರಿಯಲ್ಲಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳಾದ ಯುನಿಸೆಫ್​ ಮತ್ತು ಯುನೆಸ್ಕೋ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗೂ ಮಾಡ್ಯೂಲ್​ಗಳನ್ನು ತಯಾರಿಸಿವೆ. ಅದನ್ನೇ ಇಲ್ಲೂ ಬಳಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ವೈದ್ಯಕೀಯ ತಜ್ಞ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಸಾಹಿತಿಗಳಾದ ಡಾ. ಕೆ.ಎಂ. ಮರುಳಸಿದ್ದಪ್ಪ, ಪ್ರೊ. ಎಸ್​.ಜಿ. ಸಿದ್ದರಾಮಯ್ಯ ಸೇರಿ 9 ಮಂದಿ, ಸರ್ಕಾರ ಈಗಲಾದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಶಾಲಾ ಹಂತದಲ್ಲೇ ಲೈಂಗಿಕ ಶಿಕ್ಷಣ ನೀಡಲು ಸರ್ಕಾರ ಕ್ರಮ ವಹಿಸಬೇಕು. ಇದರಿಂದ ಮಕ್ಕಳು ಹದಿಹರೆಯದಲ್ಲಿ ತಮ್ಮ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡು ಯಾವುದೇ ಗೊಂದಲ, ಆತಂಕಗಳಿಗೆ ಒಳಗಾಗದೆ ಅದನ್ನು ನಿಭಾಯಿಸಲು ಶಕ್ತರಾಗುತ್ತಾರೆ ಎಂದು ಕ್ಯಾಮ್ಸ್​ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್​, ಸಮನ್ವಯ ವೇದಿಕೆ ಅಧ್ಯಕ್ಷ ಬಿ.ಎನ್​. ಯೋಗಾನಂದ ತಿಳಿಸಿದ್ದಾರೆ.