ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕುವೆಟ್ಟು ಗ್ರಾಪಂ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಗ್ರಾಪಂ ಅಧ್ಯಕ್ಷೆ ಭಾರತಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಣೆಜಾಲು ನಲಿಕೆ ಸಮುದಾಯ ಭವನದಲ್ಲಿ ನಡೆಯಿತು.
ಪಿಲಿಚಾಮುಂಡಿಕಲ್ಲು, ಗುರುವಾಯನಕೆರೆ ಶಾಲಾ ಬಳಿ ವಾಹನದಟ್ಟಣೆ ಅಧಿಕವಾಗಿದ್ದು, ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಹಾಸ ಪಡುತ್ತಿದ್ದಾರೆ. ಈ ಸ್ಥಳದಲ್ಲಿ ಬ್ಯಾರಿಕೇಡ್ ಇದ್ದರೂ ಅಳವಡಿಸಲು ಪೊಲೀಸ್ ಇಲಾಖೆ ಅನುಮತಿ ನೀಡುತ್ತಿಲ್ಲ. ಯಾವುದೇ ಟ್ರಾಫಿಕ್ ಪೊಲೀಸರನ್ನು ನಿಯೋಜಿಸುತ್ತಿಲ್ಲ. ಇದರಿಂದ ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅನಾಹುತ ನಡೆಯುವ ಮುನ್ನ ಸಂಬಂಧಪಟ್ಟ ಇಲಾಖೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಕುವೆಟ್ಟು ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಲೋಕೇಶ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.
ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕುವೆಟ್ಟು ಗ್ರಾಪಂನವರು ಗುರುವಾಯನಕೆರೆಯನ್ನು ಮಾರಿ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರೋರ್ವರು ಆರೋಪಿಸಿದರು. ಕೆರೆಯ ನೀರು ಕಲುಷಿತಗೊಂಡಿದೆ ಸ್ವಚ್ಛಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ನಾವು ಕೆರೆಯನ್ನು ಮಾರಿಲ್ಲ ತಪ್ಪು ಮಾಹಿತಿ ಕೊಡಬೇಡಿ. ಅದನ್ನು ಕಾನೂನು ಪ್ರಕಾರ ಮೀನು ಸಾಕಣಿಕೆಗೆ ಏಲಂ ಮಾಡಿರುವುದಾಗಿ ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ತಿಳಿಸಿದರು. ಪಿಲಿಚಂಡಿಕಲ್ಲು ಬಳಿ ಕೊಳಚೆ ನೀರು ಬರುತ್ತಿದೆ. ಶಿವಾಜಿನಗರ 5 ಸೆಂಟ್ಸ್ ಮನೆಯ ನೀರು ರಸ್ತೆಗೆ ಬಿಡುತ್ತಿದ್ದಾರೆ ಅದನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಹೇಳಿದರು.
ಬಸ್ ನಿಲ್ದಾಣ ತೆರವು ಚರ್ಚೆಗೆ ಗ್ರಾಸ
ಕಿನ್ನಿಗೋಳಿ ಬಳಿಯಿದ್ದ ಬಸ್ ನಿಲ್ದಾಣ ತೆಗೆಯಲು ನಿರ್ಣಯ ಆಗಿದ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ಬಸ್ ನಿಲ್ದಾಣ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಾರಂಭವಾದ ಕಾರಣ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣ ಹೋಗುತ್ತದೆ. ಅದರ ಅನುಸಾರ ತೆಗೆಯಲಾಗಿದೆ ಎಂದರು. ಬಸ್ ನಿಲ್ದಾಣ ತೆಗೆಯುವಾಗ ರಸ್ತೆ ಅಗಲೀಕರಣ ಪ್ರಾರಂಭವಾಗಿರಲಿಲ್ಲ. ಬಸ್ ನಿಲ್ದಾಣ ಆತುರದಿಂದ ತೆಗೆದದ್ದು ಯಾಕೆ? ಮಳೆಗಾಲ, ಬೇಸಿಗೆ ಕಾಲದ ಸಂದರ್ಭದಲ್ಲಿ ತುಂಬಾ ಅನುಕೂಲಕ್ಕಿದ ಬಸ್ ನಿಲ್ದಾಣ ತೆಗೆದು ಇದೀಗ ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಸಂದರ್ಭ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಪಿಡಿಒ ತಿಳಿಸಿದರು. ಕೆಲ ಕಾಲ ಈ ವಿಷಯದ ಕುರಿತು ಚರ್ಚೆ ನಡೆಯಿತು.
ವಿವಿಧ ಚರ್ಚೆಗಳ ಒತ್ತಾಯ
ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ ಇದರ ಬಗ್ಗೆ ಗಮನಹರಿಸಬೇಕು. ಸರ್ಕಾರಿ ಹುದ್ದೆಯಲ್ಲಿರುವವರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸಬೇಕು ಎಂದು ಗ್ರಾಮಸ್ಥರು ಹೇಳಿದರು. ಕೆಲವೂಂದು ಶಾಲೆಯಲ್ಲಿ ಶಿಕ್ಷಕರ ಕೊರೆತೆ ಇದೆ ಎಂದು ಕಲಂದರ್ ಬಿ.ಎಚ್. ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್‌ಪಿ ರಾಜೇಶ್ ಕುವೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಶಾಲೆಯಲ್ಲಿ ಹೆಚ್ಚು ಮಕ್ಕಳು ಇದ್ದಾರೆ ಎಂದರು. ಹಿಂದುರುದ್ರ ಭೂಮಿಯ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ಪಿಡಿಒ ಸರ್ವೇ ನಂಬರ್ 72 ಜಮೀನು ಗುರುತಿಸಿಸಲಾಗಿದ್ದು, ಕಂದಾಯ ಇಲಾಖೆ ಕೆಲಸ ಮುಗಿದ ಬಳಿಕ ಕ್ರಮ ವಹಿಸಲಾಗುವುದು. ಪಿಲಿಚಂಡಿಕಲ್ಲುಯಿಂದ ಶಕ್ತಿನಗರ ರಸ್ತೆ ಹದೆಗೆಟ್ಟಿದ್ದು ಆದಷ್ಟು ಬೇಗ ಸರಿಪಡಿಸಬೇಕು ಎಂದು ಕಲಂದರ್ ಬಿ.ಎಚ್. ಹೇಳಿದರು.
ಗುರುವಾಯನಕೆರೆ ಹೈಸ್ಕೂಲ್ ಬಳಿ ವಿದ್ಯುತ್ ತಂತಿ ಕೈಗೆ ಎಟಕುವ ಹಂತದಲ್ಲಿದೆ ಸರಿಪಡಿಸಬೇಕು. ದಾನ ಪತ್ರ ನೀಡಬೇಕು. ಜೆಜೆಎಂ ಕಾಮಗಾರಿ ಕೆಲವು ಭಾಗದಲ್ಲಿ ಇನ್ನೂ ನಡೆದಿಲ್ಲ ಎಂದು ಸಭೆ ಗಮನಕ್ಕೆ ತಂದರು.ಒಳ್ಳೆಯ ರೀತಿ ಚರ್ಚೆ ನಡೆದಾಗ ಗ್ರಾಮ ಕೂಡ ಅಭಿವೃದ್ಧಿಯಾಗುತ್ತದೆ ಎಂದು ನೋಡೆಲ್ ಅಧಿಕಾರಿ ಲೋಕೇಶ್ ಹೇಳಿದರು. ವಿವಿಧ ಇಲಾಖೆ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಉಪಾಧ್ಯಕ್ಷ ಗಣೇಶ್ ಕುಲಾಲ್, ಆಶಾಲತಾ, ಅಮೀನಾ, ಆನಂದ್, ಕೆ. ಮಂಜುನಾಥ, ಲಕ್ಷ್ಮೀಶ, ಮೈಮುನ್ನಿಸಾ, ಮೋಹಿನಿ, ಎಂ. ರಿಯಾಜ್, ನಿತಿನ್ ಕುಮಾರ್, ರಚನಾ ಕೆ, ಶಾಲಿನಿ, ಶಮೀಮುಲ್ಲಾ ಕೆ, ಸಿಲ್ವೆಸ್ಟರ್ ೆಲಿಕ್ಸ್ ಮೋನಿಸ್, ಸುಮಂಗಲಾ, ಉಷಾ, ವನಿತಾ, ವಿಜಯಲಕ್ಷ್ಮೀ ಹೇಮಂತ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
ಪಿಡಿಒ ಇಮ್ತಿಯಾಜ್ ಸ್ವಾಗತಿಸಿದರು. ಸಿಬ್ಬಂದಿ ಆನಂದ ಕೋಟ್ಯಾನ್ ವರದಿ ವಾಚಿಸಿದರು.
ಭತ್ತ ಬೆಳೆಗೆ ಉತ್ತೇಜನ ನೀಡಿ
ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಣಮ್ಯ ಭಟ್ ಬೈಕ್ ಅನ್ನು ಅಡಮಾನವಾಗಿಟ್ಟು ಬಡ್ಡಿ ಸಾಲ ನೀಡಿ ಅಪ್ರಾಪ್ತ ಬಾಲಕರಿಗೆ ಬಾಡಿಗೆಗೆ ಬೈಕ್ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು. ಭತ್ತದ ಬೆಳೆ ವರುಷ ಕಳೆದ್ದಂತೆ ಕಡಿಮೆಯಾಗುತ್ತಿದೆ. ಭತ್ತ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ ಉತ್ತೇಜನ ನೀಡಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.