ಬಾಗಲಕೋಟೆ ಜಿಲ್ಲಾಡಳಿತ ಭವನ ಎದುರು ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಒಕ್ಕೂಟದ ಮುಖಂಡರಾದ ಯಲ್ಲಪ್ಪ ಹೆಗಡೆ, ಗಣೇಶ ಮೇತ್ರಿ, ಈರನಗೌಡ ಪಾಟೀಲ, ಅಸ್ಗರ್ ಸರಕಾವಸ, ಪಿ.ಎಲ್.ಮಂಟೂರ ಇತರರಿದ್ದರು. 
ಜಿಲ್ಲೆ

ಸಿಪಿಐ ಎಚ್.ಆರ್.ಪಾಟೀಲ ವಿರುದ್ಧ ಕ್ರಮಕ್ಕೆ ಆಗ್ರಹ

ಗಿರೀಶ ಸಗರ

ಬಾಗಲಕೋಟೆ : ಸಿಪಿಐ ಎಚ್.ಆರ್.ಪಾಟೀಲ ಅವರನ್ನು ಬಾಗಲಕೋಟೆ ಗ್ರಾಮಾಂತರ ವೃತ್ತಕ್ಕೆ ವರ್ಗ ಮಾಡಿದ್ದನ್ನು ವಿರೋಧಿಸಿ ರೈತ, ಕಾರ್ಮಿಕ, ಅಲ್ಪಸಂಖ್ಯಾತ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಒಕ್ಕೂಟದ ಸದಸ್ಯರು ಸಿಪಿಐ ಎಚ್.ಆರ್.ಪಾಟೀಲ ವರ್ಗಾವಣೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ರೈತರು ಹಾಗೂ ಕಾರ್ಮಿಕರ ವೇದಿಕೆಗೆ ಬೆಂಕಿ ಹಚ್ಚಿಸಿದ ಪ್ರಕರಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ಮುಧೋಳದಲ್ಲಿ ಪ್ರತಿಭಟನೆ ನಡೆದಾಗ ಮುಧೋಳ ಸಿಪಿಐ ಆಗಿದ್ದ ಎಚ್.ಆರ್.ಪಾಟೀಲ ಅವರನ್ನು ರಾಯಚೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ತಿಮ್ಮಾಪುರ ಸಚಿವರಾಗುತ್ತಿದ್ದಂತೆ ಎಚ್.ಆರ್.ಪಾಟೀಲ ಬಾಗಲಕೋಟೆ ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆಗೊಂಡಿರುವುದು ಆತಂಕಕಾರಿ ವಿಷಯ ಎಂದು ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದರು.

ಒಕ್ಕೂಟದ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ಸಿಪಿಐ ಪಾಟೀಲ ಮುಧೋಳ ತಾಲೂಕಿನ 3 ಠಾಣೆಗಳಲ್ಲಿ 6 ವರ್ಷ ಪಿಎಸ್‌ಐ ಆಗಿ, ಮುಂದೆ ಸಿಪಿಐಯಾಗಿ ಪದೋನ್ನತಿಗೊಂಡ ಬಳಿಕ ಬಾಗಲಕೋಟೆ ಹೆಸ್ಕಾಂ, ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಮತ್ತೆ ಮುಧೋಳಕ್ಕೆ ಬಂದರು. ರನ್ನ ಸಕ್ಕರೆ ಕಾರ್ಖಾನೆ ಕಾರ್ಮಿಕರು ವಿವಿಧ ಬೇಡಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ 283ನೇ ದಿನವಾದ 2022ರ ಏಪ್ರಿಲ್ 15 ರಂದು ಅಧಿಕಾರ ದುರುಪಯೋಗಪಡಿಸಿಕೊಂಡು ಹಿಂಬಾಲಕರಿಂದ ಪ್ರತಿಭಟನಾ ವೇದಿಕೆಗೆ ಬೆಂಕಿ ಹಚ್ಚಿಸಿ ಹೋರಾಟದ ದಿಕ್ಕು ತಪ್ಪಿಸಿದ ಅಧಿಕಾರಿಯನ್ನು ಮತ್ತೊಮ್ಮೆ ಜಿಲ್ಲೆಗೆ ಬರಲು ಬಿಡಬಾರದು ಎಂದು ಒತ್ತಾಯಿಸಿದರು.

ಒಕ್ಕೂಟದ ಮುಖಂಡರಾದ ಗಣೇಶ ಮೇತ್ರಿ, ಈರನಗೌಡ ಪಾಟೀಲ, ಅಸ್ಗರ್ ಸರಕಾವಸ, ಪಿ.ಎಲ್.ಮಂಟೂರ ಇತರರಿದ್ದರು.