ಜಿಲ್ಲೆ

ಎಂಇಎಸ್ ವಿರುದ್ಧ ನಿರ್ಣಾಯಕ ಕ್ರಮ: ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಲು ಕೋರಿಕೆ...

Webdesk - Ravikanth

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಶ್ವ ಹಿಂದು ಪರಿಷತ್ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈವರೆಗೆ ಕೆಲವರನ್ನು ಬಂಧಿಸಿ ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ ಅತ್ಯಂತ ನಿರ್ಣಾಯಕ ಕ್ರಮದ ಮೂಲಕ ಇದನ್ನು ಮುಂದುವರಿಸಲು ಅವಕಾಶ ಕೊಡುವುದಿಲ್ಲ. ಅಲ್ಲದೆ, ಮಹಾರಾಷ್ಟ್ರದ ಗೃಹ ಕಾರ್ಯದರ್ಶಿ ಜತೆಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಲು ಕೋರಿದ್ದೇವೆ ಎಂದರು. ರಾಜ್ಯದಲ್ಲಿ ಪುಂಡಾಟಿಕೆ ಮಾಡಿದ ಪ್ರಮುಖರನ್ನು ಬಂಧಿಸಿ ನಿಯಂತ್ರಣ ಮಾಡಿದ್ದೇವೆ. ಈ ಬಾರಿ ಎಂಇಎಸ್​ನ ಪ್ರಮುಖರನ್ನೇ ಬಂಧಿಸಿದ್ದೇವೆ. ಹಿಂದೆಲ್ಲ ಇಂತಹ ಕೆಲಸ ಆಗಿರಲಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರು ಯಾರೇ ಇರಲಿ, ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕಠಿಣ ಕ್ರಮಕ್ಕೆ ಸಿದ್ದು ಒತ್ತಾಯ: ಬೆಳಗಾವಿಯಲ್ಲಿ ಮಹಾತ್ಮರ ಪ್ರತಿಮೆ ವಿರೂಪಗೊಳಿಸಿದ ಘಟನೆಗಳು ಈ ಮೊದಲೂ ನಡೆದಿವೆ. ಇಲ್ಲಿ ಎಂಇಎಸ್​ನವರಿಗೆ ಪೊಲೀಸ್ ಬಗ್ಗೆ ಭಯವಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ರಾಜ್ಯದಲ್ಲಿ ರಾಜ್ಯ ಗುಪ್ತಚರ ದಳ ಸತ್ತು ಹೋಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಅನಗೋಳದಲ್ಲಿ ಎಂಇಎಸ್ ಪುಂಡರು ಭಗ್ನಗೊಳಿಸಿದ್ದ ಸ್ಥಳದಲ್ಲೇ ಮರುಸ್ಥಾಪನೆಗೊಂಡ ರಾಯಣ್ಣ ಪ್ರತಿಮೆಗೆ ಸೋಮವಾರ ಗೌರವ ಸಮರ್ಪಿಸಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಯಾವುದೇ ಜಾತಿ ಹಾಗೂ ಸಮುದಾಯಕ್ಕೆ ಸೇರಿದ ವ್ಯಕ್ತಿ ಅಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ಪಟ ಸ್ವಾತಂತ್ರ್ಯ ಪ್ರೇಮಿ, ರಾಯಣ್ಣ ಪ್ರತಿಮೆ ವಿರುಪಗೊಳಿಸಿದವರು ಶಾಂತಿಯ ಪರಿಪಾಲಕರಲ್ಲ. ಅಶಾಂತಿ ಮೂಡಿಸುವವರೇ ಆಗಿದ್ದಾರೆ. ಎಂಇಎಸ್​ನ ಪುಂಡ ಪೋಕರಿಗಳು ಸಮಾಜಘಾತುಕ ಕೃತ್ಯ ಎಸಗುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬಸ್ ಸಂಚಾರ ಬಂದ್

ದೇವದುರ್ಗ (ಲಿಂಗಸುಗೂರು): ಸಾರಿಗೆ ಬಸ್ ಮೇಲೆ ಎಂಇಎಸ್-ಶಿವಸೇನೆ ಕಾರ್ಯಕರ್ತರು ಮರಾಠಿ ಅಕ್ಷರಗಳನ್ನು ಬರೆವ ಮೂಲಕ ಉದ್ಧಟತನ ತೋರಿದ್ದರಿಂದ ಮಹಾರಾಷ್ಟ್ರಕ್ಕೆ ತೆರಳುವ ಸಂಚಾರ ಬಂದ್ ಮಾಡಲಾಗಿದೆ.

ಬಸವೇಶ್ವರ ಭಾವಚಿತ್ರಕ್ಕೆ ಮಸಿ

ಖಾನಾಪುರ (ಬೆಳಗಾವಿ): ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ನಡೆಯುತ್ತಿರುವ ಕಿಡಿಗೇಡಿ ಕೃತ್ಯಗಳು ಮುಂದುವರಿದಿದ್ದು, ಭಾನುವಾರ ರಾತ್ರಿ ತಾಲೂಕಿನ ಹಲಸಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗದ ನಾಡ ಧ್ವಜವನ್ನು ಕಂಬದಿಂದ ಕೆಳಗಿಳಿಸಿ ಸುಟ್ಟು ಹಾಕಿದ್ದಾರೆ. ಬಸವೇಶ್ವರ ವೃತ್ತದಲ್ಲಿದ್ದ ಬಸವೇಶ್ವರ ಭಾವಚಿತ್ರ ಮತ್ತು ನಾಮಫಲಕಕ್ಕೆ ಮಸಿ ಬಳಿದು ಉದ್ಧಟತನ ಮೆರೆದಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದ್ದು, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಗೃಹ ಸಚಿವರ ಉತ್ತರಕ್ಕೆ ಅತೃಪ್ತಿ ಪ್ರತಿಪಕ್ಷಗಳ ಸಭಾತ್ಯಾಗ

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಘಟನೆಯನ್ನು ವಿಧಾನ ಪರಿಷತ್​ನಲ್ಲಿ ಪ್ರತಿಪಕ್ಷಗಳು ಖಂಡಿಸಿದವು. ಜತೆಗೆ ಸರ್ಕಾರ ನೀಡಿದ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿ, ಸೋಮವಾರ ಸಭಾತ್ಯಾಗ ಮಾಡಿದವು. ಕಿಡಿಗೇಡಿಗಳನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಸಹಾಯಕ ನಿಲುವು ಒಪ್ಪಲಾಗದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಬಲವಾಗಿ ವಿರೋಧಿಸಿದವು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕಾಂಗ್ರೆಸ್​ನ ಎಸ್. ರವಿ, ಬಿ.ಕೆ. ಹರಿಪ್ರಸಾದ್, ಜೆಡಿಎಸ್​ನ ಶ್ರೀಕಂಠೇಗೌಡ, ಮರೀತಿಬ್ಬೆಗೌಡ ಸೇರಿ ಎರಡು ಪಕ್ಷಗಳ ನಾಯಕರು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು. ಸಮರ್ಪಕ ಉತ್ತರ ನೀಡಲಾಗದ ಅಸಮರ್ಥ ಗೃಹಮಂತ್ರಿ ಎಂದು ಮೂದಲಿಸಿದರು.

ಪ್ರತಿಪಕ್ಷದ ಸಭಾತ್ಯಾಗದ ಮಧ್ಯೆಯೂ ಮಾತನಾಡಿದ ಅರಗ ಜ್ಞಾನೇಂದ್ರ, ನೆಲ-ಜಲ, ಭಾಷೆ ಬಗ್ಗೆ ಸವಾಲು ಬಂದರೆ ಸರ್ಕಾರ ಸುಮ್ಮನೆ ಕೂರುವುದಿಲ್ಲ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು. ಬೆಳಗಾವಿಯಲ್ಲಿ ರಾಯಣ್ಣ ಮೂರ್ತಿ ಭಗ್ನ ಮಾಡಿ ಪರಿಸ್ಥಿತಿ ಉದ್ವಿಗ್ನ ಗೊಳಿಸಿದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಿ ದ್ದೇವೆ. ಈಗಾಗಲೇ 38 ಜನರನ್ನು ಬಂಧಿಸಿದ್ದೇವೆ. ತಲೆ ಮರಿಸಿಕೊಂಡವರ ಬಂಧಿಸುವ ಕಾರ್ಯಾಚರಣೆ ಮುಂದುವರಿಸಿದೆ. ಇದರಲ್ಲಿ ರಾಜಕಾರಣ ಇಲ್ಲ. ಯಾರನ್ನು ಕಾಪಾಡುವ ಕೆಲಸ ಮಾಡುವುದಿಲ್ಲ ಎಂದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಮಾಡಿರುವ ನಾಡದ್ರೋಹಿಗಳನ್ನು ರಾಜ್ಯದಿಂದ ಗಡೀಪಾರು ಮಾಡಬೇಕು, ಘಟನೆಯಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ನಿಷೇಧ ಮಾಡಬೇಕು.

| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ

ನಾಡು-ನುಡಿ, ಜಲ ಎಂಬ ಪ್ರಶ್ನೆ ಉದ್ಭವಿಸಿದಾಗ ನಾವೆಲ್ಲರೂ ಒಂದೇ ಎಂಬುದನ್ನು ತೋರಿಸಿಕೊಡಬೇಕು. ಇದೊಂದು ಖಂಡನೀಯ ಕೖತ್ಯವಾಗಿದೆ. ನಮ್ಮ ಸ್ವಾತಂತ್ರö ಹೋರಾಟಗಾರರ ಪ್ರತಿಮೆಗಳನ್ನು ದಾಳಿ ನಿಜಕ್ಕೂ ನೋವಿನ ಸಂಗತಿ. ತಕ್ಷಣ ಶಿಕ್ಷೆ ಆಗಬೇಕು.

| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

ಎಂಇಎಸ್ ಎಂದರೆ, ಮಹಾರಾಷ್ಟŠ ಹೇಡಿಗಳ ಸಮಿತಿ ಆಗಿದೆ. ರಾಯಣ್ಣ ಬದುಕಿದ್ದಾಗಲೂ ಹ್ಯೇಯ ಕೖತ್ಯ ಎಸಗಿ ಅವರನ್ನು ಬ್ರಿಟೀಷರಿಗೆ ಹಿಡಿದುಕೊಡಲಾಯಿತು. ಇದೀಗ ಪ್ರತಿಮೆಗೂ ಅಪಚಾರ ಮಾಡುವಂತಹ ಕೖತ್ಯ ಸಹಿಸಲು ಸಾಧ್ಯವಿಲ್ಲ. ಹೇಡಿಗಳ ಬಂಧನ ಮಾಡಬೇಕು.

| ಕೆ.ಎಸ್.ಈಶ್ವರಪ್ಪ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಗೊಳಿಸಿದ ಪ್ರಕರಣದ ಹಿಂದೆ ಎಂಇಎಸ್ ಇದೆ ಎಂದು ನಾನು ಹೇಳುವುದಿಲ್ಲ. ಕಿಡಿಗೇಡಿಗಳು ಮೂರ್ತಿ ಭಗ್ನಗೊಳಿಸಿದ್ದಾರೆ. ನಾನು ಒಂದು ಸಂಘಟನೆ ವಿರುದ್ಧ ಮಾತನಾಡು ವುದಿಲ್ಲ. ಆ ಸಂಸ್ಥೆ ಬ್ಯಾನ್ ಮಾಡಿ ಎಂದು ನಾನು ಏಕೆ ಹೇಳಲಿ?

| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಮೂರ್ತಿಗಳು ನಮ್ಮ ಅಸ್ಮಿತೆಯ ಪ್ರತೀಕ. ಶಿವಾಜಿ ಮಹಾರಾಜರು ಮರಾಠಿಗಳಿಗೆ ಸೀಮಿತರಲ್ಲ. ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರ. ರಾಯಣ್ಣ ಮೂರ್ತಿ ಭಗ್ನ ಅಕ್ಷಮ್ಯ ಅಪರಾಧ. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ದುರದೃಷ್ಟಕರ.

| ಡಾ.ಎಂ.ಮಹೇಶ ಜೋಶಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ