ಜಿಲ್ಲೆ

ವಿಡಿಯೋ: ಸೈಕಲ್ ಮೇಲೆ ಶಂಕಿತನ ಶವ ಸಾಗಣೆ; ಅಂಬುಲೆನ್ಸ್​ ನೀಡದ ಆರೋಗ್ಯ ಇಲಾಖೆ; ಎಂ.ಕೆ. ಹುಬ್ಬಳ್ಳಿಯಲ್ಲಿ ಮನಕಲಕುವ ಘಟನೆ

ಬೆಳಗಾವಿ: ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಸಾವಿಗೀಡಾದ್ದರಿಂದ ಆರೋಗ್ಯಾಧಿಕಾರಿಗಳು ಶವ ಸಾಗಿಸಲು ಅಂಬುಲೆನ್ಸ್ ಸಹ ನೀಡದೇ ಅಮಾನವೀಯತೆ ಮೆರೆದಿದ್ದಾರೆ. ದಿಕ್ಕು ತೋಚದೇ ಸಂಬಂಧಿಕರು ಸೈಕಲ್ ಮೇಲೆಯೇ ಶವ ಸಾಗಿಸಿದ ಮನಕಲಕುವ ಘಟನೆಗೆ ಬೆಳಗಾವಿ ಭಾನುವಾರ ಸಾಕ್ಷಿಯಾಗಿದೆ.

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಗಾಂಧಿನಗರದಲ್ಲಿ ಘಟನೆ ನಡೆದಿದ್ದು, ಎರಡು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಸದೆಪ್ಪ ಪರಸಪ್ಪ ಸಲಗಾರ(71) ಎಂಬುವರಿಗೆ ಕರೊನಾ ಸೋಂಕಿನ ಲಕ್ಷಣಗಳ ಕಂಡುಬಂದ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಲು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ಭಾನುವಾರ ಬೆಳಗ್ಗೆ 6ಕ್ಕೆ ಮನೆಯಲ್ಲಿಯೇ ವೃದ್ಧ ಕೊನೆಯುಸಿರೆಳೆದಿದ್ದಾರೆ.

ಪತಿಯನ್ನು ಕಳೆದುಕೊಂಡ ವೃದ್ಧೆ ಗಂಗಮ್ಮ ಶವ ಸಾಗಿಸಲು ಅಂಬುಲೆನ್ಸ್​ಗಾಗಿ ವೈದ್ಯಾಧಿಕಾರಿಗಳನ್ನು ಬೆಳಗ್ಗೆಯಿಂದಲೇ ಅಂಗಲಾಚಿದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆಗೂ ಮುನ್ನವೇ ಶಂಕಿತ ಸಾವನ್ನಪ್ಪಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿಯಂತೆ ಶವ ಸಂಸ್ಕಾರಕ್ಕೆ ಮುಂದಾಗಲಿಲ್ಲ.

ವಿಪರ್ಯಾಸವೆಂದರೆ, ಸೋಂಕಿನ ಭೀತಿಯಿಂದ ಸ್ಥಳೀಯರು ಸಹ ಸಹಾಯಕ್ಕೆ ಮುಂದಾಗಲಿಲ್ಲ. ದಿಕ್ಕು ತೋಚದಂತಾದ ಸಂಬಂಧಿಕರು ಮಧ್ಯಾಹ್ನ ಶವವನ್ನು ಪ್ಲಾಸ್ಟಿಕ್‌ ಹಾಳೆಯಲ್ಲಿ ಸುತ್ತಿ ಸೈಕಲ್ ಮೇಲೆ ಸಾಗಿಸಿ, ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.