ಜಿಲ್ಲೆ

ಶೆಡ್‌ನಲ್ಲಿ ಯುವಕನ ಮೃತದೇಹ ಪತ್ತೆ

ಸೌಮ್ಯ ಆರ್

ಕಾಸರಗೋಡು: ಬೋವಿಕ್ಕಾನ ಕಾವುಪಾಡಿ ನಿವಾಸಿ ಎಡನೀರು ಅಬ್ದುಲ್ಲ ಎಂಬುವರ ಪುತ್ರ ರಾಶಿದ್(24)ನ ಮೃತದೇಹ ಮನೆಯ ಸಮೀಪದ ಶೆಡ್ ಬಳಿ ಕುಳಿತ ಭಂಗಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ನೂರು ಮೀ. ದೂರದ ಈ ಶೆಡ್ಡಿನಲ್ಲಿ ರಾಶಿದ್ ವಾಸಿಸುತ್ತಿದ್ದು, ತಾಯಿ ಆಯಿಷಾಬಿ ಬುಧವಾರ ಆಹಾರ ತೆಗೆದುಕೊಂಡು ಶೆಡ್ಡಿನ ಬಳಿ ತೆರಳಿದಾಗ ರಾಶಿದ್ ಅಲ್ಲಿರಲಿಲ್ಲ. ಆಹಾರ ಶೆಡ್ಡಿನೊಳಗಿರಿಸಿ ಮನೆಗೆ ವಾಪಸಾಗಿ ಮೊಬೈಲ್ ಕರೆಮಾಡಿದಾಗ ಕರೆ ಸ್ವೀಕರಿಸದಿರುವುದರಿಂದ ಸಂಶಯಗೊಂಡು ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದ್ದು ಕಾಲಿನಲ್ಲಿ ರಕ್ತ ಸೋರುತ್ತಿತ್ತು. ರಾಶಿದ್ ಬೆಂಗಳೂರಿನಲ್ಲಿ ಸಹೋದರರೊಂದಿಗೆ ಹೋಟೆಲ್‌ನಲ್ಲಿ ಸಹಾಯಕರಾಗಿ ದುಡಿಯುತ್ತಿದ್ದವರು ಇತ್ತೀಚೆಗಷ್ಟೆ ವಾಪಸಾಗಿದ್ದರು.ಈಗ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿನೀಡಿ ತಪಾಸಣೆ ನಡೆಸಿದರು. ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹ ಉನ್ನತ ಶವ ಮಹಜರಿಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.