ಕಾರವಾರ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ಮುಕ್ತಾಯವಾಗಿ ಮೂರು ತಿಂಗಳಾಗುತ್ತ ಬಂದರೂ ಇದುವರೆಗೂ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.
ಇದರಿಂದ ಚುನಾಯಿತ ಸದಸ್ಯರು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ.
ಜಿಲ್ಲೆಯ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಎರಡುವರೆ ವರ್ಷದ ಅಧಿಕಾರಾವಧಿ ಏಪ್ರೀಲ್ ಅಂತ್ಯ ಅಥವಾ ಮೇ ತಿಂಗಳಿಗೆ ಮುಕ್ತಾಯವಾಗಿದೆ.
ಜಿಲ್ಲೆಯ ಮೂರು ನಗರಸಭೆಗಳಿಗೆ ಜಿಲ್ಲಾಧಿಕಾರಿಯನ್ನು, ನಾಲ್ಕು ಪುರಸಭೆಗಳಿಗೆ ಉಪವಿಭಾಗಾಧಿಕಾರಿ ಮಟ್ಟದ ಅಧಿಕಾರಿಗಳನ್ನು, ಐದು ಪಟ್ಟಣ ಪಂಚಾಯಿತಿಗಳಿಗೆ ಆಯಾ ತಹಸೀಲ್ದಾರ್‌ಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಹೊಸ, ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಇದುವರೆಗೂ ಸರ್ಕಾರದಿಂದ ಪ್ರಕಟವಾಗಿಲ್ಲ. ಹಾಗಾಗಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬವಾಗಿದೆ.
ಇದನ್ನೂ ಓದಿ:ದೋಣಿ ಮಗುಚಿ ಬಿದ್ದು ಇಬ್ಬರು ಮೀನುಗಾರರಿಗೆ ಗಾಯ
ಈ ಹಿಂದೆ ಅಧ್ಯಕ್ಷ ಉಪಾಧ್ಯಕ್ಷರಿರುವಾಗ ಪ್ರತಿ ತಿಂಗಳಿಗೊಮ್ಮೆ ಸರ್ವಸಾಧಾರಣ ಸಭೆಯಾಗುತ್ತಿತ್ತು.
ಪುರಗಳ ಸಮಸ್ಯೆಗಳ ಬಗ್ಗೆ ಅಲ್ಲಿ ಚರ್ಚೆಯಾಗುತ್ತಿತ್ತು. ಅಽಕಾರಿಗಳು ಮಾಡಬೇಕಾದ ಕ್ರಿಯಾ ಯೋಜನೆಗೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳ ಅನುಮತಿ ಪಡೆಯಬೇಕಾಗಿತ್ತು.
ಆದರೆ, ಅದ್ಯಾವುದೂ ನಡೆಯದೇ ನಾಲ್ಕು ತಿಂಗಳಾಗುತ್ತ ಬಂದಿದೆ.
ಆಡಳಿತಾಽಕಾರಿಗಳು ತಮ್ಮನ್ನು ಕರೆದು ಸಭೆ ಮಾಡುತ್ತಿಲ್ಲ.
ಆದರೆ, ನಮ್ಮ ಮಾತಿಗೆ ಕಚೇರಿಯಲ್ಲಿ ಬೆಲೆ ಇಲ್ಲವಾಗಿದೆ ಎಂಬುದು ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳ ಗೋಳು.
ಇದರಿಂದ ಅಧಿಕಾರಿಗಳದ್ದೇ ದರ್ಬಾರ್ ಆಗಿದೆ, ಸಮಸ್ಯೆಗಳ ಬಗ್ಗೆ ಜನ ನಮ್ಮನ್ನು ಕೇಳುತ್ತಾರೆ.
ವಿಧಾನಸಭೆ ಚುನಾವಣೆಯ ಸಮಯದಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಕಾರನ್ನು ವಶಕ್ಕೆ ಪಡೆಯಲಾಗಿತ್ತು.
ನಂತರ ಅದನ್ನು ವಾಪಸ್ ನೀಡಿಲ್ಲ. ಇತ್ತೀಚೆಗೆ ನಗರಸಭೆ ಕಾರನ್ನು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ದೂದಸಾಗರ ಪ್ರವಾಸಕ್ಕೆ ಕೊಂಡೊಯ್ದ ಮಾಹಿತಿ ಇದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಖರೀದಿಯಾಗಿ ಇನ್ನೂ ವರ್ಷವಾಗದ ಕಾರನ್ನು ಈ ರೀತಿ ಅಧಿಕಾರಿಗಳು ದುರ್ಬಳಕೆ ಮಾಡುವುದು ಎಷ್ಟು ಸರಿ ಎಂಬುದು ಕಾರವಾರ ನಗರಸಭೆ ಸದಸ್ಯರ ಪ್ರಶ್ನೆಯಾಗಿದೆ.
ಈ ಕುರಿತು ಅವರು ಸೋಮವಾರ ಪೌರಾಯುಕ್ತ ಉದಯಕುಮಾರ ಶೆಟ್ಟಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಶಿರಸಿ ಹಾಗೂ ದಾಂಡೇಲಿ ನಗರಸಭೆಯ ಅಧ್ಯಕ್ಷರ ಕಾರುಗಳೂ ಜಿಲ್ಲಾಧಿಕಾರಿ ಸಹಿಗಾಗಿ ವಾರದಲ್ಲಿ ಎರಡು ದಿನ ಕಾರವಾರ ಡಿಸಿ ಕಚೇರಿಗೆ ಬಂದು ಹೋಗಬೇಕು ಎಂವ ಅರೋಪವಿದೆ.
2018 ರ ಆಗಸ್ಟ್ ನಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು.
ಆದರೆ, ಆಗಲೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ವಿಳಂಬವಾಗಿದ್ದರಿಂದ ಸದಸ್ಯರು ಆಯ್ಕೆಯಾಗಿದ್ದರೂ ಅವರಿಗೆ ಯಾವುದೇ ಅಧಿಕಾರವಿರಲಿಲ್ಲ.
ನಗರ ಸ್ಥಳೀಯ ಸಂಸ್ಥೆಗಳು ಆಡಳಿತಾಧಿಕಾರಿಗಳಿಂದಲೇ ನಡೆದಿದ್ದವು.
2020 ನವೆಂಬರ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿ ನಗರಗಳಲ್ಲಿ ಜನಪ್ರತಿನಿದಿಗಳ ದರ್ಬಾರ್ ಶುರುವಾಗಿತ್ತು.
ಹಾಗೆ ನೋಡಲು ಹೋದರೆ ಹಾಲಿ ಇರುವ ಸದಸ್ಯರ ಅಧಿಕಾರಾವಧಿ ಎರಡು ವರ್ಷ ವೃದ್ಧಿಯಾಗಿದೆ.
ಏಕೆಂದರೆ 2018 ರಲ್ಲೇ ಚುನಾವಣೆಯಾಗಿ ಸದಸ್ಯ ಎಂದು ಘೋಷಣೆಯಾಗಿದ್ದರೂ ಅವರ ಅಧಿಕಾರ ಅನುಮೋದನೆಯಾಗಿರಲಿಲ್ಲ.
ಏಕೆಂದರೆ, ಮುನ್ಸಿಪಲ್ ಕಾಯ್ದೆಯ ಅನ್ವಯ ಸದಸ್ಯರ ಅಧಿಕಾರಾವಧಿಯನ್ನು ಮೊದಲ ಸಭೆ ನಡೆದ ದಿನದಿಂದ ಮುಂದಿನ ಐದು ವರ್ಷ ಎಂದು ಲೆಕ್ಕ ಹಾಕಲಾಗುತ್ತದೆ. ಇದರಿಂದ ಹಾಲಿ ಸದಸ್ಯರ ಅವಧಿ ಇನ್ನೂ ಸುಮಾರು ಎರಡು ವರ್ಷ ಉಳಿದುಕೊಂಡಿದೆ.
ನಮ್ಮ ವಾರ್ಡ್ ನಲ್ಲಿ ಬೀದಿ ದೀಪಗಳು ಸರಿಯಾಗಿಲ್ಲ. ಅದನ್ನು ಸರಿಪಡಿಸಲು ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಧ್ಯಕ್ಷರಿದ್ದರೆ ನಾವು ಅವರ ಬಳಿ ಏನಾದರೂ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆವು' ಹನುಮಂತಕಾರವಾರ ನಗರಸಭೆ ಸದಸ್ಯ
ಕಾರವಾರ ನಗರಸಭೆ ದಿವಾಳಿಯಾಗಿದೆ. ಹಿಂದೆ ಆರ್ಥಿಕ ಅನುಮೋದನೆಯಾಗಿದ್ದಕ್ಕಿಂತ ಹೆಚ್ಚು ಅನುದಾನ ಖರ್ಚು ಮಾಡಲಾಗಿದೆ. ಈಗ ಕೆಲಸ ಮಾಡಲು ಹಣವೇ ಇಲ್ಲ. ಈ ಎಲ್ಲ ಅಂಶಗಳನ್ನು ಚರ್ಚಿಸಲು ಜಿಲ್ಲಾಧಿಕಾರಿಗಳೂ ಸಭೆ ಕರೆಯುತ್ತಿಲ್ಲ. ನಾವು ಇದ್ದೂ ಇಲ್ಲದಂತಾಗಿದ್ದೇವೆ.ಸಂದೀಪ ತಳೇಕರ್ಕಾರವಾರ ನಗರಸಭೆ ಸದಸ್ಯ