ಸಮರ್ಪಕವಾಗಿ ಚರಂಡಿ ಇರದೆ ಅಲ್ಲಲ್ಲಿ ನೀರು ನಿಂತಿದೆ. 
ಜಿಲ್ಲೆ

ಮರ ರಸ್ತೆಗೆ ಉರುಳುವ ಭೀತಿ

Avinash R

-ನರೇಂದ್ರ ಎಸ್.ಮರಸಣಿಗೆ, ಹೆಬ್ರಿ

ಹೆಬ್ರಿ-ಕಾರ್ಕಳ ಸಂಪರ್ಕ ರಸ್ತೆ ಅಗಲೀಕರಣ ಕಾಮಗಾರಿ ಹೆಬ್ರಿ ಅಮೃತ ಭಾರತಿ ಕಾಲೇಜು ಮುಂಭಾಗದಿಂದ ಜರವತ್ತು ಸೇತುವೆ ತನಕ ನಡೆದಿದೆ. ಆದರೆ ಈ ವೇಳೆ ಜೆಸಿಬಿ ಮೂಲಕ ಬುಡ ಬಿಡಿಸಲಾಗಿರುವ ಸಡಿಲ ಮರಗಳನ್ನು ತೆರವುಗೊಳಿಸಿಲ್ಲ. ಇವು ಮಳೆಗಾಲದಲಿ ರಸ್ತೆಗೆ ಉರುಳುವ ಭೀತಿ ಉಂಟಾಗಿದೆ.

ಮರಗಳ ಬುಡದ ಮಣ್ಣು ಬಿಡಿಸಿ ಇಟ್ಟಿರುವಲ್ಲಿ ಹಾಗೂ ಮಣ್ಣು ಅಗೆದಲ್ಲಿ ಹಲವು ಮರಗಳು ರಸ್ತೆಗೆ ಬಾಗಿ ನಿಂತಿವೆ. ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಮರಗಳು ಉರುಳಿ ವಾಹನ ಸವಾರರಿಗೆ ಅಪಾಯ ಉಂಟಾಗಬಹುದು.

40 ಮರ ಕಡಿಯಲು ಮನವಿ

ಲೋಕೋಪಯೋಗಿ ಇಲಾಖೆ ಸುಮಾರು 40 ಮರ ಕಡಿಯಲು ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಅದು ಇನ್ನೂ ಪರಿಶೀಲನೆಯಲ್ಲಿದೆ. ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಓಡಾಡುತ್ತವೆ. ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಸಮರ್ಪಕ ಚರಂಡಿ ಇಲ್ಲ

ರಸ್ತೆ ಬದಿಗಳಲ್ಲಿ ಚರಂಡಿ ಇಲ್ಲ. ಹೆಚ್ಚು ಮಳೆ ಸುರಿದಾಗ ನೀರು ಮಣ್ಣು ತೆಗೆದ ಜಾಗದಲ್ಲಿ ಸಂಗ್ರಹವಾಗುತ್ತದೆ. ವಿಪರೀತ ಮಳೆಯಾದರೆ ರಸ್ತೆಗೆ ಬರಬಹುದು. ಸಮರ್ಪಕ ಯೋಜನೆ ರೂಪಿಸದೆ ಈ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದೆ. ಅಲ್ಲಲ್ಲಿ ಜಲ್ಲಿ ಹಾಕಿ ಸಮತಟ್ಟು ಮಾಡಿ, ಮಣ್ಣು ಅಗೆಯಲಾಗಿದೆ. ಚುನಾವಣೆ ನಡೆದ ನಂತರ ಕೆಲಸ ನಡೆದಿಲ್ಲ. ಮಳೆಗಾಲಕ್ಕೆ ಸೂಕ್ತ ಸಿದ್ಧತೆ ಮಾಡದೆ ಸಮಸ್ಯೆಯಾಗಿದೆ.

ಎರಡು ದಿನದ ಹಿಂದೆ ಉರುಳಿತ್ತು ವೃಕ್ಷ

ವಿಪರೀತ ಮಳೆಗೆ ಮಣ್ಣು ಸಡಿಲವಾಗಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದಿತ್ತು. ಈ ಸಂದರ್ಭ ಯಾವುದೇ ವಾಹನವಿರಲಿಲ್ಲ. ಒಂದು ವೇಳೆ ವಾಹನಕ್ಕೆ ಬಿದ್ದಿದ್ದರೆ ಸಾವು ನೋವುಗಳಿಗೆ ಕಾರಣವಾಗುತ್ತಿತ್ತು. ಆದ್ದರಿಂದ ಶೀಘ್ರ ಮರ ತೆರವಿಗೆ ಜನ ಒತ್ತಾಯಿಸಿದ್ದಾರೆ.

ಮಣ್ಣು ಸಡಿಲವಾಗಿರುವುದರಿಂದ ಬೇರಿನ ಹಿಡಿತವಿಲ್ಲದ ಮರ ರಸ್ತೆಗೆ ಉರುಳಲು ಸಿದ್ಧವಾಗಿರುವುದು ಹಾಗೂ ಜರುವತ್ತು ಇಳಿಜಾರಿನಲ್ಲಿ ವಿದ್ಯುತ್ ಕಂಬ ತೆರವುಗೊಳಿಸದೆ ಸುತ್ತ ಜಲ್ಲಿ ಹಾಕಲಾಗಿದೆ.

ರಸ್ತೆ ಮಧ್ಯೆ ವಿದ್ಯುತ್ ಕಂಬ

ಜರುವತ್ತು ಇಳಿಜಾರಿನಲ್ಲಿ ವಿದ್ಯುತ್ ಕಂಬ ತೆರವುಗೊಳಿಸದೆ ಸುತ್ತ ಜಲ್ಲಿ ಹಾಕಲಾಗಿದೆ. ಕಂಬ ಒಂದು ಅಡಿಯಷ್ಟು ಅಂಚಿನಿಂದ ಒಳಭಾಗದಲ್ಲಿದೆ. ಕಂಬಗಳು ರಸ್ತೆಯಂಚನಲ್ಲೇ ಇರಿವಿದರಿಂದ ವಾಹನಗಳು ಓಡಾಡುವಾಗ ಸವಾರರ ಗಲಿಬಿಲಿಗೊಳಗಾಗುತ್ತಾರೆ.

ಮಳೆಗಾಲವಾಗಿರುವುದರಿಂದ ಕಾಮಗಾರಿ ನಿಲ್ಲಿಸಿದ್ದೇವೆ. 40 ಮರ ತೆರವಿಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಮಂಜೂರಾದ ತಕ್ಷಣ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮರ ತೆರವುಗೊಳಿಸಲಾಗುವುದು. -ಲಾಯ್ಡ ಸಂದೀಪ್ ಡಿಸಿಲ್ವ, ಜೂನಿಯರ್ ಇಂಜಿನಿಯರ್, ಪಿಡಬ್ಲ್ಯೂಡಿ ಇಲಾಖೆ
ಅನೇಕ ಮರಗಳು ರಸ್ತೆಗೆ ಉರುಳಲು ಸಿದ್ಧವಾಗಿವೆ. ದಿನನಿತ್ಯ ಸಾವಿರಾರು ಪ್ರಯಾಣಿಕರು ಈ ರಸ್ತೆ ಅವಲಂಬಿಸಿರುವುದರಿಂದ ಸಂಬಂಧಪಟ್ಟವರು ಶೀಘ್ರ ಮರ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಸಾವು-ನೋವು ಉಂಟಾದರೆ ಅವರೇ ಹೊಣೆ.-ಬೇಳಂಜೆ ಹರೀಶ್ ಪೂಜಾರಿ, ಸಾರ್ವಜನಿಕ
ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಒಂದು ವೇಳೆ ತೀರಾ ಅಪಾಯವಿದ್ದರೆ ಕ್ರಮ ಜರುಗಿಸಲು ಸೂಚಿಸುತ್ತೇನೆ. ಮರ ತೆರವಿಗೆ ಸಂಬಂಧಿಸಿದ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮಕ್ಕೆ ಸೂಚಿಸುತ್ತೇನೆ.-ಸತೀಶ್ ಎನ್., ಎಸಿಫ್, ಅರಣ್ಯ ಇಲಾಖೆ ಮೂಡುಬಿದಿರೆ ಉಪ ವಿಭಾಗ