ಅಪಾಯಕಾರಿ ಯುಟರ್ನ್ ಇರುವ ಮಾರಿಪಳ್ಳದ ಇಳಿಜಾರು ರಸ್ತೆ. 
ಜಿಲ್ಲೆ

ಹೆದ್ದಾರಿಯಲ್ಲಿ ಅಪಾಯಕಾರಿ ಜಂಕ್ಷನ್: ಬಸ್‌ಬೇ, ಜೀಬ್ರಾ ಕ್ರಾಸ್ ಇಲ್ಲದೆ ತೊಂದರೆ : ಪಾದಚಾರಿಗಳ ಜೀವ ಬಲಿ

ಸೌಮ್ಯ ಆರ್

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 77ರಲ್ಲಿ ಅರ್ಕುಳದಿಂದ ಬಿ.ಸಿ.ರೋಡ್‌ವರೆಗೆ ಅಪಘಾತಕ್ಕೆ ಆಹ್ವಾನ ನೀಡುವ ಅಪಾಯಕಾರಿ ಜಂಕ್ಷನ್‌ಗಳಿವೆ.

ಹೆದ್ದಾರಿಯುದ್ದಕ್ಕೂ ಸರಿಯಾದ ಬಸ್‌ಬೇ ಇಲ್ಲದೆ ಸಾರ್ವಜನಿಕರಿಗೆ ರಸ್ತೆ ದಾಟಲು ಜೀಬ್ರಾ ಕ್ರಾಸ್ ವ್ಯವಸ್ಥೆಗಳಿಲ್ಲದೆ, ಫುಟ್‌ಪಾತ್ ಇಲ್ಲದೆ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ. ಪುದು ಗ್ರಾಮದ ಕಡೆಗೋಳಿ ಹಾಗೂ ಮಾರಿಪಳ್ಳ ಜಂಕ್ಷನ್ ಬಳಿ ಸ್ವಲ್ಪವೆ ಅಂತರದಲ್ಲಿ ಎರಡೆರಡು ಹೆದ್ದಾರಿ ಕ್ರಾಸಿಂಗ್ ಇರುವುದರಿಂದ ಇವೆರಡೂ ಅಪಘಾತ ವಲಯ ಆಗಿದೆ.

ಅಪಾಯಕಾರಿ ಯುಟರ್ನ್

ಮಾರಿಪಳ್ಳದಿಂದ ಪರಂಗಿಪೇಟೆ ಕಡೆಗೆ ಹೋಗುವ ರಸ್ತೆ ಇಳಿಜಾರಾಗಿದೆ. ಇದೇ ಜಾಗದಲ್ಲಿ ಯುಟರ್ನ್ ಕೂಡ ಇದೆ. ಪುದು ಗ್ರಾಮದ ಸುಜೀರು, ದತ್ತನಗರ ಮತ್ತಿತರ ಕಡೆಗಳಿಗೆ ಸಂಪರ್ಕಿಸುವ ರಸ್ತೆ ಇಲ್ಲಿಯೇ ಸಂಗಮಿಸುತ್ತಿದ್ದು, ಪರಂಗಿಪೇಟೆಯಿಂದ ಬರುವ ವಾಹನ ಸವಾರರು ಇಲ್ಲಿ ಯುಟರ್ನ್ ಪಡೆಯುತ್ತಾರೆ. ಬಿ.ಸಿ.ರೋಡ್ ಕಡೆಯಿಂದ ಬರುವ ವಾಹನಗಳು ಇಳಿಜಾರು ರಸ್ತೆಯಲ್ಲಿ ಸಹಜವಾಗಿಯೇ ಅತ್ಯಂತ ವೇಗವಾಗಿ ಚಲಿಸುವುದರಿಂದ ಹಲವು ಬಾರಿ ಅಪಘಾತ ಸಂಭವಿಸಿದೆ. ಇಲ್ಲಿ ಯಾವುದೇ ಎಚ್ಚರಿಕೆಯ ಫಲಕಗಳಿಲ್ಲ.

ವಾಹನಗಳ ನಿಯಂತ್ರಣಕ್ಕಾಗಿ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇಡಲಾಗಿದೆ. ಇದೇ ಭಾಗದಲ್ಲಿ ಸುಜೀರು ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಇದ್ದು, ಶಾಲಾ ಮಕ್ಕಳು ಹಾಗೂ ಈ ಜನರು ಓಡಾಡುವ ಪ್ರದೇಶವೂ ಆಗಿರುವುದರಿಂದ ಡೇಂಜರ್ ಜೋನ್ ಆಗಿ ಗಮನ ಸೆಳೆಯುತ್ತಿದೆ.

ಅಪಘಾತಕ್ಕೆ ಬಲಿ

ಕೆಲವು ದಿನಗಳ ಹಿಂದೆ ಈ ಸ್ಥಳದಲ್ಲಿ ಬ್ಯಾರಿಕೇಡ್‌ನ ಅರಿವಿಲ್ಲದೆ ಬೈಕ್ ಡಿಕ್ಕಿಯಾಗಿ ಕಂಟೈನರ್‌ನಡಿಗೆ ಬಿದ್ದು ಇಬ್ಬರು ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಆಂಬುಲೆನ್ಸ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಗೆ ವಾಹನ ಡಿಕ್ಕಿಯಾಗಿದೆ. ಸಣ್ಣ-ಪುಟ್ಟ ಅಪಘಾತಗಳು ಈ ಸ್ಥಳದಲ್ಲಿ ಸಾಮಾನ್ಯ.

ಕಡೆಗೋಳಿ ತಿರುವು

ಕಡೆಗೋಳಿ ಬಳಿಯ ತಿರುವು ಕೂಡ ಅಪಾಯಕಾರಿಯಾಗಿದೆ. ತುಂಬೆ ಕಡೆಯಿಂದ ಬರುವ ವಾಹನಗಳು ಕೊಡ್ಮಣ್, ಬೆಂಜನಪದವು, ಪೊಳಲಿ ಕಡೆಗೆ ಹೋಗಲು, ಆ ಭಾಗದಿಂದ ಬರುವ ವಾಹನಗಳು ಮಂಗಳೂರು ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿಯನ್ನು ಕ್ರಾಸ್ ಮಾಡಬೇಕಾಗಿದೆ. ಇಲ್ಲಿ ವಾಹನ ಚಲಾಯಿಸುವಾಗ ಸ್ವಲ್ಪ ಗಮನ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಮನ ಹರಿಸಿ ಇಲ್ಲಿ ಯುಟರ್ನ್ ಇರುವ ಬಗ್ಗೆ ಸೂಚನಾ ಫಲಕ ಅಥವಾ ಸ್ಪೀಡ್ ಬ್ರೇಕರ್ ಹಂಪ್‌ಗಳನ್ನು ಅಳವಡಿಸಿದರೆ ಜೀವಹಾನಿ ತಪ್ಪಿಸಬಹುದು.

ಮಾರಿಪಳ್ಳ ಜಂಕ್ಷನ್ ಬಳಿಯಿಂದ ಕಡೆಗೋಳಿ ತನಕ ಸಾರ್ವಜನಿಕರು ನಡೆದಾಡಲು, ಸ್ಥಳೀಯ ವಾಹನಗಳು ಓಡಾಡಲು ಪ್ರತ್ಯೇಕ ಸರ್ವೀಸ್ ರಸ್ತೆ ಮಾಡಿದರೆ ಉತ್ತಮ. ಬಸ್ ನಿಲುಗಡೆ ಮಾಡಲು ಬಸ್‌ಬೇ ಮಾಡಿದರೆ ಒಳ್ಳೆಯದು. ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಯಾವುದೆ ಸಮಸ್ಯೆ ಇಲ್ಲದೇ ಸುಗಮ ಸಂಚಾರ ಮಾಡಬಹುದು. - ಗಣೇಶ್ ಕುಮಾರ್, ಪರಂಗಿಪೇಟೆ