ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ಪರಿಚಿತಳಾದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಮೂವರು ದುರುಳರು ಆರು ತಿಂಗಳುಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರು ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಆ್ಯಂಡಿ ಜಾರ್ಜ್, ಸಂತೋಷ್ ಹಾಗೂ ಶಶಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್, ಲ್ಯಾಪ್ಟಾಪ್, ಪೆನ್ಡ್ರೈವ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು ಖಾಸಗಿ ಕಾಲೇಜೊಂದರಲ್ಲಿ ನೃತ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಆ್ಯಂಡಿ ಜಾರ್ಜ್ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಸಂತ್ರಸ್ತೆ ಜೊತೆ ಸ್ನೇಹ ಬೆಳೆಸಿದ್ದ. ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿದ್ದು, ಪ್ರೀತಿಸಲು ಶುರು ಮಾಡಿದ್ಧಾರೆ.
ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ ಯುವತಿಯ ಖಾಸಗಿ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಲು ಶುರು ಮಾಡಿದ್ದಾನೆ. ಇದರಿಂದ ಭಯಗೊಂಡ ಯುವತಿಯೂ ಆರೋಪಿಯಿಂದ ಅಂತರವನ್ನು ಕಾಯ್ದುಕೊಂಡಿದ್ದಾಳೆ. ಬಳಿಕ ತನ್ನ ಬಳಿಯಿದ್ದ ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಯುವತಿಯ ಖಾಸಗಿ ಚಿತ್ರಗಳನ್ನು ಇಟ್ಟುಕೊಂಡು ಪ್ರಕರಣದ ಪ್ರಮುಖ ಆರೋಪಿ ಆ್ಯಂಡಿ ಜಾರ್ಜ್ನ ಇಬ್ಬರು ಸ್ನೇಹಿತರಾದ ಸಂತೋಷ್ ಹಾಗೂ ಶಶಿ ಸಹ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಆರೋಪಿ ಯುವತಿಯ ಖಾಸಗಿ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ನಂತರ ಆಕೆ ನಡೆದ ಘಟನೆ ಬಗ್ಗೆ ಮನೆಯವರಿಗೆ ತಿಳಿಸಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತಲೆಮಾರಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಮೊಬೈಲ್ ಫೋನ್, ಲ್ಯಾಪ್ಟಾಪ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಆ್ಯಂಡಿ ಈ ಹಿಂದೆ ಇದೇ ರೀತಿ ಹಲವು ಕೃತ್ಯಗಳನ್ನು ಎಸಗಿರುವುದಾಗಿ ಕಂಡು ಬಂದಿದ್ದು, ವಿಚಾರಣೆ ನಡೆಸಿ ಶೀಘ್ರದಲ್ಲೇ ಚಾರ್ಜ್ಶೀಟ್ ಸಿದ್ದಪಡಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.