ಟೇಕಾಫ್​ಗೂ ಮುನ್ನವೇ ತಾಂತ್ರಿಕ ದೋಷ! ಮಂಗಳೂರು ಏರ್​ಪೋರ್ಟ್​ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ   
ದಕ್ಷಿಣ ಕನ್ನಡ

ಟೇಕಾಫ್​ಗೂ ಮುನ್ನವೇ ತಾಂತ್ರಿಕ ದೋಷ ಪತ್ತೆ! ಮಂಗಳೂರು ಏರ್​ಪೋರ್ಟ್​ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ  

ಮಂಗಳೂರು:ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಟೇಕಾಫ್ ಹಂತದಲ್ಲಿದ್ದಾಗ ತಾಂತ್ರಿಕ ದೋಷ ಪತ್ತೆಯಾಗಿದ್ದು, ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ವಿಮಾನ ಕೊನೆ ಕ್ಷಣದಲ್ಲಿ ರನ್‌ವೇಯಲ್ಲೇ ಸುರಕ್ಷಿತವಾಗಿ ನಿಂತಿದೆ. ಇದರಿಂದ, ವಿಮಾನದಲ್ಲಿದ್ದ 236 ಜನರ ಜೀವ ಉಳಿದಿದೆ.

ಪೈಲಟ್​ ಸಮಯಪ್ರಜ್ಞೆ

ನಿನ್ನೆ ಸಂಜೆ 6 ಗಂಟೆ ವೇಳೆಗೆ ವಿಮಾನ ಇನ್ನೇನು ಟೇಕಾಫ್ ಆಗುತ್ತೆ ಎನ್ನುವಾಗಲೇ ಪೈಲಟ್ ಇಂಜಿನ್​ನಲ್ಲಿ ದೋಷ ಇರುವುದನ್ನು ಪತ್ತೆಹಚ್ಚಿದ್ದು, ಕೂಡಲೇ ಬ್ರೇಕ್ ಎಳೆದು ವಿಮಾನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಟೇಬಲ್ ಟಾಪ್ ಏರ್​ಪೋರ್ಟ್​ ಆಗಿದ್ದರಿಂದ ಅದಾಗಲೇ ವಿಮಾನ ಮುಂದಕ್ಕೆ ಹೋಗಿದ್ದು ಬ್ರೇಕ್ ಅದುಮಿದ್ದರಿಂದ ನಿಧಾನಕ್ಕೆ ಮುಂದಕ್ಕೆ ಹೋಗುತ್ತಾ ರನ್​ವೇ ಕೊನೆಯಲ್ಲಿ ನಿಂತು ಬಿಟ್ಟಿದೆ. ಇದರಿಂದ ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ತಪ್ಪಿದಂತಾಗಿದೆ.

ಬದುಕಿತು 236 ಜೀವ

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ 229 ಪ್ರಯಾಣಿಕರು ಹಾಗೂ ಪೈಲಟ್ ಸೇರಿ 7 ಮಂದಿ ಸಿಬ್ಬಂದಿ ಇದ್ದರು. ಪ್ರಯಾಣಿಕರು, ಸಿಬಂದಿ ಕುಳಿತ ಬಳಿಕ ಗ್ರೀನ್ ಸಿಗ್ನಲ್ ಸಿಗುತ್ತಲೇ ವಿಮಾನ ಮುಂದಕ್ಕೆ ಚಲಿಸಿತ್ತು. ಇನ್ನೇನು ಮೇಲಕ್ಕೆ ಹೋಗುತ್ತೆ ಎನ್ನುವಾಗಲೇ ವಿಮಾನದ ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆದರೆ, ಪೈಲೆಟ್ ಸಮಯಪ್ರಜ್ಞೆ ಮೆರೆದು ಕೂಡಲೇ ಬ್ರೇಕ್ ಹಾಕಿ, ವಿಮಾನ ನಿಲ್ಲಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ರನ್​ವೇ ಬಿಟ್ಟು ಮುಂದಕ್ಕೆ ಚಲಿಸುತ್ತಿದ್ದರೆ, ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗುವ ಸಾಧ್ಯತೆ ಇತ್ತು. ತಿರುಗಿ ಬಂದು ವಿಮಾನವನ್ನು ಇಳಿಸುವುದಕ್ಕೂ ಸಮಯ ಸಿಗುತ್ತಿರಲಿಲ್ಲ. ತಕ್ಷಣ ವಿಮಾನ ನಿಲ್ಲಿಸಿದ್ದಲ್ಲದೆ, ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಮತ್ತೆ ಹಿಂದಕ್ಕೆ ಕರೆತಂದು ಪ್ರಯಾಣಿಕರ ನಿಟ್ಟುಸಿರಿಗೆ ಕಾರಣರಾಗಿದ್ದಾರೆ. ಕೂಡಲೇ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ವ್ಯವಸ್ಥೆ ಮಾಡಿದ್ದಾರೆ. ಇಂಡಿಗೋ ಸಂಸ್ಥೆಯು ಬಳಿಕ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದೆ.