ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಐಪಿಎಸ್ ಅಧಿಕಾರಿಗಳು ಹಾಗೂ ರಾಜರಾಕರಣಿಗಳ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು, ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಮತ್ತೊಂದು ಜಾಲ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದೆ. ಉತ್ತರಪ್ರದೇಶದ ಮಥುರಾ ಜಿಲ್ಲೆಯ ಚೌಕಿ ಬಂಗಾರದ ಇಬ್ರಾಹಿಂ (36) ಮತ್ತು ಮೊಹಮದ್ ಶೋಕಿನ್ (28) ಎಂಬುವರನ್ನು ಬಂಧಿಸಲಾಗಿದ್ದು, 5 ಮೊಬೈಲ್, 10ಕ್ಕೂ ಅಧಿಕ ಸಿಮ್‌ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬಿ.ಎಲ್.ಸಂತೋಷ್ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದರು. ನವೆಂಬರ್‌ನಲ್ಲಿ ಸಂತೋಷ್ ಪರಿಚಯಸ್ಥ ಅಜಿತ್ ಶೆಟ್ಟಿ ಕಿರಾಡಿ ಎಂಬುವರಿಗೆ ಹಣ ವರ್ಗಾವಣೆ ಮಾಡುವಂತೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿದ್ದರು. ಬಿ.ಎಲ್. ಸಂತೋಷ್ ಎಂದು ಭಾವಿಸಿದ್ದ ಅಜಿತ್, 15 ಸಾವಿರ ರೂ. ವರ್ಗಾವಣೆ ಮಾಡಿದ್ದರು. ಇದೇ ರೀತಿ ಹಲವರಿಗೆ ಹಣ ಕೋರಿ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಹಣ ಸಂದಾಯ ಮಾಡಿಸಿಕೊಂಡಿದ್ದ ಬ್ಯಾಂಕ್ ಖಾತೆಯ ವಿವರ ಹಾಗೂ ಫೋನ್ ನಂಬರ್ ಪರಿಶೀಲಿಸಿದಾಗ, ವಂಚಕರು ಉತ್ತರಪ್ರದೇಶದ ಮಥುರಾ ಬಳಿಯ ಹಳ್ಳಿಯೊಂದರಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದರ ಜಾಡು ಹಿಡಿದು ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು ನೇತೃತ್ವದ ತಂಡ ಕಾರ್ಯಾಚರಣೆ ಮುಂದುವರಿಸಿತ್ತು.
ವಾಹನಕ್ಕೆ ಅಡ್ಡಗಟ್ಟಿದ್ದ ಗ್ರಾಮಸ್ಥರು: ಚೌಕಿ ಬಂಗಾರದ ಗುಡಿಸಲಿನ ಮೇಲೆ ದಾಳಿ ನಡೆಸಿದಾಗ 10 ಮಂದಿ ಸಿಕ್ಕಿಬಿದ್ದಿದ್ದರು, ಅವರನ್ನು ವಶಕ್ಕೆ ಪಡೆದು ಕಾರಿನಲ್ಲಿ ಹತ್ತಿಸಿಕೊಂಡು ಬರುತ್ತಿದ್ದಾಗ ಪೊಲೀಸ್ ವಾಹನವನ್ನು ಅಡ್ಡಗಟ್ಟಿದ್ದ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗ್ಯಾಂಗ್‌ನ ಪ್ರಮುಖ ಆರೋಪಿ ಲಿಯಾಖತ್ ಸೇರಿ 8 ಮಂದಿ ಪರಾರಿಯಾಗಿದ್ದಾರೆ. ಇಬ್ರಾಹಿಂ ಮತ್ತು ಮೊಹಮದ್ ಶೋಕಿನ್ ಸಿಕ್ಕಿಬಿದ್ದಿದ್ದು ಸಾಹಸ ಪಟ್ಟುಕೊಂಡು ಬಂಧಿಸಿ ಕರೆತರಲಾಗಿದೆ.
ವಂಚಕರಿಗೆ ಓದಲು, ಬರೆಯಲು ಬರುವುದಿಲ್ಲ: ಪರಾರಿಯಾಗಿರುವ ಪ್ರಮುಖ ಆರೋಪಿ ಲಿಯಾಖತ್ ಮಾತ್ರ ಪಿಯುಸಿ ಓದಿದ್ದಾನೆ. ಬಂಧಿತ ಆರೋಪಿಗಳಿಬ್ಬರು 8ನೇ ತರಗತಿಗೆ ಓದು ನಿಲ್ಲಿಸಿದ್ದಾರೆ. ಇನ್ನು ಕೆಲ ಆರೋಪಿಗಳು ಶಾಲೆ ಮೆಟ್ಟಿಲು ಹತ್ತಿಲ್ಲ. ಹಿಂದಿ ಭಾಷೆ ಹೊರತಾಗಿ ಬೇರೆ ಭಾಷೆಯಲ್ಲಿ ಮಾತನಾಡಲು ಮತ್ತು ಬರೆಯಲು ಬರುವುದಿಲ್ಲ. ಚಾಟಿಂಗ್ ಮಾಡುವುದನ್ನು ಲಿಯಾಖತ್ ಕಲಿಸಿಕೊಟ್ಟಿದ್ದ. ಆತ ಬರೆದುಕೊಟ್ಟಂತೆ, ‘ಹಾಯ್ ಹಲೋ, ಹೌ ಆರ್ ಯೂ’ ಎಂದು ಸಂದೇಶ ಕಳುಹಿಸುತ್ತಿದ್ದರು. ಅದಕ್ಕೆ ಪ್ರತಿಕ್ರಿಯೆ ಏನು ಬಂದಿದೆ ಎಂಬುದನ್ನು ಓದಲು ಆರೋಪಿಗಳಿಗೆ ಬರುತ್ತಿರಲಿಲ್ಲ. ಅಂದಾಜಿನ ಮೇಲೆ, ಐ ಆ್ಯಮ್ ಗುಡ್, ಫೈನ್ ಎಂದು ಪ್ರತಿಕ್ರಿಯಿಸುತ್ತಿದ್ದರು. ಬಳಿಕ ಇಂತಿಷ್ಟು ಹಣ ಬೇಕು, ಮುಂದಿನ ವಾರ ನೀಡುವುದಾಗಿ ಹೇಳಿ ಬ್ಯಾಂಕ್ ಖಾತೆ ವಿವರ ಹಾಗೂ ಫೋನ್‌ಪೇ, ಗೂಗಲ್‌ಪೇ ನಂಬರ್ ಕಳುಹಿಸಿ ಗಾಳ ಬೀಸುತ್ತಿದ್ದರು.
ವಂಚಿಸುತ್ತಿದ್ದುದು ಹೀಗೆ.. ಮಥುರಾ ಜಿಲ್ಲೆಯ ಚೌಕಿ ಬಂಗಾರ್ ಮತ್ತು ಸಹಾರ ಹಳ್ಳಿಯಲ್ಲಿ 50ಕ್ಕೂ ಹೆಚ್ಚು ಯುವಕರು ಇದೇ ದಂಧೆಯಲ್ಲಿ ತೊಡಗಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಇನ್ನಿತರ ಜಾಲತಾಣಗಳಲ್ಲಿ ಅನ್ಯ ರಾಜ್ಯಗಳ ಪೊಲೀಸ್ ಅಧಿಕಾರಿ, ಐಎಎಸ್ ಹಾಗೂ ಪ್ರಭಾವಿ ರಾಜಕಾರಣಿಗಳ ಪ್ರೊೈಲ್ ಪರಿಶೀಲಿಸುತ್ತಿದ್ದರು. ಫೋಟೋ ಕದ್ದು ಅವರ ಹೆಸರಲ್ಲಿ ನಕಲಿ ಖಾತೆ ತೆರೆಯುತ್ತಿದ್ದರು. ಮೂಲ ಖಾತೆಯಲ್ಲಿರುವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಮೆಸೆಂಜರ್ ಮೂಲಕ ಹಣ ಕೋರುತ್ತಿದ್ದರು. ಎಂಟತ್ತು ಮಂದಿಯಿಂದ ತಲಾ ಕನಿಷ್ಟ 5 ಸಾವಿರ ರೂ. ಯಿಂದ 15 ಸಾವಿರ ರೂ. ಪಡೆದು ನಂತರ ಖಾತೆ ನಿಷ್ಕ್ರಿಯ ಮಾಡುತ್ತಿದ್ದರು.
ಕೃತ್ಯಕ್ಕೆ ಅಮಾಯಕರ ಬ್ಯಾಂಕ್ ಖಾತೆ: ಅಮಾಯಕರಿಂದ ದಾಖಲೆ ಪಡೆದು ಅಸ್ಸಾಂನಲ್ಲಿ ಸಿಮ್‌ಕಾರ್ಡ್ ಖರೀದಿಸುತ್ತಿದ್ದರು. ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ, ಸರ್ಕಾರದ ವಿವಿಧ ಯೋಜನೆಗಳಿಂದ ಹಣ ಬರುತ್ತದೆ ಎಂದು ನಂಬಿಸಿ ಅವರಿಂದ ಬ್ಯಾಂಕ್‌ಗಳಲ್ಲಿ ಖಾತೆ ತೆರೆಸುತ್ತಿದ್ದರು. ಬಳಿಕ ಆನ್‌ಲೈನ್ ಬ್ಯಾಂಕಿಂಗ್‌ನ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್, ಎಟಿಎಂ ಕಾರ್ಡ್‌ಗಳನ್ನು ಅವರಿಗೆ ಗೊತ್ತಾಗದಂತೆ ತಾವೇ ಪಡೆದುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.