ಜಿಲ್ಲೆ

ಸೈಬರ್ ಕಳ್ಳರಿಂದ ಖಾತೆಗೆ ಕನ್ನ!: ಕೌನ್ ಬನೇಗಾ ಕರೋಡ್​ಪತಿ ಸೋಗಿನಲ್ಲಿ ವಂಚನೆ

ಬೆಂಗಳೂರು: ಕೌನ್ ಬನೇಗಾ ಕರೋಡ್​ಪತಿ (ಕೆಬಿಸಿ) ಕಾರ್ಯಕ್ರಮ ಮುಗಿದು ವರ್ಷಗಳೇ ಕಳೆದರೂ ಅದರ ಹೆಸರಿನಲ್ಲಿ ಇಂದಿಗೂ ಜನ ವಂಚನೆಗೆ ಒಳಗಾಗುತ್ತಿದ್ದಾರೆ.

‘ಕೆಬಿಸಿ’ಯಲ್ಲಿ 2.5 ಲಕ್ಷ ರೂ. ಬಹುಮಾನ ಬಂದಿದೆ ಎಂದು ಹೇಳಿ 13 ಸಾವಿರ ರೂ.ಗಳನ್ನು ಸೈಬರ್ ಕಳ್ಳರು ದೋಚಿರುವ ಬಗ್ಗೆ ಸೈಬರ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವಿಂದರಾಜನಗರದ ನಿವಾಸಿ ಬಿ. ಲಾಲ್ ವಂಚನೆಗೆ ಒಳಗಾದವರು. ಲಾಲ್ ಮೊಬೈಲ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಆನ್​ಲೈನ್​ನಲ್ಲಿ ನಡೆಸಿದ ‘ಕೆಬಿಸಿ’ ಕಾರ್ಯಕ್ರಮದಲ್ಲಿ ನಿಮಗೆ 2.5 ಲಕ್ಷ ರೂ. ಬಹುಮಾನ ಬಂದಿದೆ. ಕರೊನಾ ಲಾಕ್​ಡೌನ್ ಜಾರಿಯಾಗಿರುವುದರಿಂದ ಹಣವನ್ನು ನಿಮಗೆ ತಲುಪಿಸಲು ಸಾಧ್ಯವಿಲ್ಲ. ನಿಮ್ಮ ಬ್ಯಾಂಕ್ ಖಾತೆ ನೀಡಿದರೆ ನೆಟ್ ಬ್ಯಾಂಕಿಂಗ್ ಮೂಲಕ ಜಮೆ ಮಾಡುವುದಾಗಿ ಹೇಳಿದ್ದಾರೆ.

ಅದನ್ನು ನಂಬಿದ ಲಾಲ್, ಬ್ಯಾಂಕ್ ಖಾತೆ ವಿವರವನ್ನು ನೀಡಿದ್ದಾರೆ. ತಕ್ಷಣ ಸೈಬರ್ ವಂಚಕರು, ಲಾಲ್ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 13,700 ರೂ.ಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಎಚ್ಚೆತ್ತ ಲಾಲ್, ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ತೆಗೆದು ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.