ಸುಳ್ಯ: ನಗರದ ಕಲ್ಚರ್ಪೆಯಲ್ಲಿ ಮಳೆನೀರಿಗೆ ಸಿಲುಕಿ ಹರಿದು ಹೋಗಿ ಪಯಸ್ವಿನಿಗೆ ಸೇರಬಹುದಾದ ಕಸ ತೆರವುಗೊಳಿಸುವ ಕಾರ್ಯ ನಡೆಯಿತು.
ಈ ಭಾಗದಲ್ಲಿ ಪೂಮಲೆ ಭಾಗದಿಂದ ಹರಿದು ಬರುವ ನೀರಿನ ತೋಡು ಇದ್ದು, ಈ ನೀರಿನೊಂದಿಗೆ ಕಲ್ಚರ್ಪೆಯಲ್ಲಿ ರಾಶಿ ಹಾಕಲಾದ ಕಸ ಕೊಚ್ಚಿಕೊಂಡು ಹೋಗಿ ಪಯಸ್ವಿನಿ ನದಿಯ ಒಡಲು ಸೇರುವಂತಾಗಿತ್ತು. ನಗರದ ಹೆಚ್ಚಿನ ಜನರು ನಪಂ ಸರಬರಾಜು ಮಾಡುವ ಪಯಸ್ವಿನಿ ನದಿ ನೀರನ್ನೇ ಆಶ್ರಯಿಸಿರುವುದರಿಂದಾಗಿ ಜನರು ಮಲಿನ ನೀರನ್ನು ಕುಡಿಯುವಂತಾಗಿತ್ತು. ಇದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ವರದಿಗೆ ಸ್ಪಂದಿಸಿರುವ ನಪಂ ಸದಸ್ಯ ವಿನಯಕುಮಾರ್ ಕಂದಡ್ಕ ಸ್ಥಳಕ್ಕೆ ಜೆಸಿಬಿ ತರಿಸಿ ಕಸದ ತೆರವ ಮಾಡಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.