ಕಾರ್ಕಳ ಪಡುಬಿದ್ರೆ ಸಾಗುವ ರಾಜ್ಯ ಹೆದ್ದಾರಿಯ ಹಾಳೆಕಟ್ಟೆ ತಿರುವು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಬೃಹತ್ ಮರ 
ಜಿಲ್ಲೆ

ಹೆದ್ದಾರಿಯಲ್ಲಿ 'ಮರ’ಣ ಸೂಚಕ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯ ಹಾಳೆಕಟ್ಟೆಯಲ್ಲಿರುವ ಮರವೊಂದು ಪ್ರತಿ ಬಾರಿಯೂ ಗಾಳಿ ಮಳೆ ಸುರಿದಾಗ ರಸ್ತೆ ಮೇಲೆ ಸಂಪೂರ್ಣ ಬಾಗುತ್ತಿದ್ದು, ಭವಿಷ್ಯದಲ್ಲಿ ಭಾರಿ ಅಪಾಯ ಉಂಟುಮಾಡುವ ಎಲ್ಲ ಸಾಧ್ಯತೆಗಳಿವೆ.

ಕಲ್ಯಾ ಗ್ರಾಪಂ ಪ್ಯಾಪ್ತಿಯ ಹಾಳೆಕಟ್ಟೆ ಹಾಗೂ ನಿಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಣ್ಣು ತಿರುವು ರಸ್ತೆಯ ಮಧ್ಯಭಾಗದಲ್ಲಿ ಹೆದ್ದಾರಿಗೆ ತಾಗಿಕೊಂಡಿರುವ ಬೃಹತ್ ಗಾತ್ರದ ಮರವೊಂದು ಧರೆಗೆ ಉರುಳಲು ಕ್ಷಣಗಣನೆ ಆರಂಭಿಸಿದಂತಿದೆ.

ಜೋರಾಗಿ ಗಾಳಿ ಬೀಸುವ ಸಂದರ್ಭ ಈ ಮಾರ್ಗದಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಕಂಟೇನರ್ ಸಹಿತ ಭಾರಿ ವಾಹನ ಸಂಚರಿಸುವ ಸಂದರ್ಭ ಮರಗಳ ಕೊಂಬೆಗಳು ಅಡ್ಡಿಯುಂಟು ಮಾಡುತ್ತಿವೆ. ಇತ್ತೀಚೆಗಷ್ಟೇ ಈ ಮರಕ್ಕೆ ಸಮೀಪವೇ ಇದ್ದ ಅಕೇಷಿಯಾ ಮರಗಳು ಎರಡು ಬಾರಿ ವಿದ್ಯುತ್ ಕಂಬಳ ಮೇಲೆ ಉರುಳಿ ಬಿದ್ದಿದ್ದವು. ಜತೆಗೆ ರಸ್ತೆಯೂ ತಿರುವಿನಿಂದ ಕೂಡಿರುವುದರಿಂದ ಅಪಾಯಕಾರಿಯೂ ಹೌದು.

ಮುಂಗಾರು ಪೂರ್ವದಲ್ಲೇ ಶಾಸಕರ ನೇತೃತ್ವದಲ್ಲಿ ತಾಲೂಕು ಅಧಿಕಾರಿಗಳ ಸಭೆ ನಡೆದಿದ್ದು, ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿತ್ತು. ಜತೆಗೆ ಹೆದ್ದಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಅಪಾಯಕಾರಿ ಮರಗಳನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಲಾಗಿತ್ತಾದರೂ ಹಾಳೆಕಟ್ಟೆಯ ತಿರುವಿನಲ್ಲಿರುವ ಮರ ಬಾಕಿಯಾಗಿದೆ. ಆದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆರವಿಗೆ ಪಟ್ಟು

ಸ್ಥಳೀಯರು ಈ ಮರ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿ ಜನಪ್ರತಿನಿಧಿಗಳ ಬಳಿ ಅಲೆದದ್ದಷ್ಟೇ ಹೊರತು ಪ್ರತಿಕ್ರಿಯೆ ಶೂನ್ಯವಾಗಿದೆ. ಮರದಲ್ಲಿ ಈಗಾಗಲೇ ಬಿರುಕು ಮೂಡಿದ್ದು, ಶಿಥಿಲಗೊಂಡಿರುವ ಸಾಧ್ಯತೆ ಇದೆ. ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅಪಾಯ ಸಂದರ್ಭ ಊಹಿಸಲು ಅಸಾಧ್ಯ.

ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಅತ್ತಿಂದಿತ್ತ ಓಡಾಡುತ್ತಿರುತ್ತದೆ. ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದೇ ಮರದಡಿಯಿಂದ ಸಾಗುತ್ತಾರೆ. ಪ್ರಸ್ತುತ ಮರ ಅಪಾಯಕಾರಿ ಸ್ಥಿತಿಯಲ್ಲಿದ್ದು, ಯಾವುದೇ ಸಂದರ್ಭ ಧರೆಗೆ ಬೀಳುವ ಸಾಧ್ಯತೆಯಿದೆ. ಅರಣ್ಯ ಇಲಾಖೆ ಕೂಡಲೇ ಮರ ತೆರವುಗೊಳಿಸಬೇಕು.-ಈಶ್ವರ್ ಬಡಿಗಾರ್, ಗ್ರಾಮಸ್ಥ
ಮರ ತೆರವುಗೊಳಿಸಲು ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಜೋರಾಗಿ ಬೀಸುವ ಗಾಳಿಗೆ ಯಾವುದೇ ಸಂದರ್ಭ ಮರವು ಧರೆಗೆ ಉರುಳುವ ಸಾಧ್ಯತೆ ಹೆಚ್ಚಿದೆ.-ಸುರೇಂದ್ರ ಶೆಟ್ಟಿ, ವಾಹನ ಸವಾರ