ಜಿಲ್ಲೆ

ಶಾಂತಿ ಸೌಹಾರ್ದತೆ ಉಳಿಸಲು ಪ್ರಯತ್ನ : ಸಿಪಿಐ ಜಿಲ್ಲಾ ಕಾರ‌್ಯದರ್ಶಿ ಬಿ.ಶೇಖರ್ ಆಶಯ

ಸೌಮ್ಯ ಆರ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಉಳಿಸಲು ಪೂರಕ ಪ್ರಯತ್ನಗಳು ಆಗಬೇಕಿದೆ ಎಂದು ಪಕ್ಷದ ಜಿಲ್ಲಾ ಕಾರ‌್ಯದರ್ಶಿ ಬಿ.ಶೇಖರ್ ಹೇಳಿದರು.

ಬಂಟ್ವಾಳದ ಎ.ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಸಿಪಿಐ ಪಕ್ಷದ 25ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಮ್ಮೇಳನದಲ್ಲಿ ಪಕ್ಷದ ಮಾಜಿ ಜಿಲ್ಲಾ ಕಾರ‌್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ‌್ಯದರ್ಶಿ ವಿ.ಎಸ್.ಬೇರಿಂಜ ಹಾಗೂ ಪಕ್ಷದ ಮಂಗಳೂರು ತಾಲೂಕು ಕಾರ‌್ಯದರ್ಶಿ ಎಂ.ಕರುಣಾಕರ ಶುಭಕೋರಿದರು.

ಪಕ್ಷದ ಹಿರಿಯ ಮುಂದಾಳು ಬಿ.ಬಾಬು ಭಂಡಾರಿ, ಬಿ.ಎಂ.ಹಸೈನಾರ್ ವಿಟ್ಲ ಹಾಗೂ ಕುಸುಮಾ ಕಳ್ಳಿಗೆ ಉಪಸ್ಥಿತರಿದ್ದರು. ತಾಲೂಕು ಕಾರ‌್ಯದರ್ಶಿ ಸುರೇಶ್ ಕುಮಾರ್ ವರದಿ ಮಂಡಿಸಿದರು. ನೂತನ ತಾಲೂಕು ಸಮಿತಿಗೆ ಆಯ್ಕೆ ನಡೆದು ಬಂಟ್ವಾಳ ತಾಲೂಕಿನ ವಿವಿಧ ಶಾಖೆಗಳಿಂದ ಸುಮಾರು 17 ಜನರನ್ನು ಆಯ್ಕೆ ಮಾಡಲಾಯಿತು.

ಕಾರ‌್ಯದರ್ಶಿಯಾಗಿ ಸುರೇಶ್ ಕುಮಾರ್ ಸಹಕಾರ‌್ಯದರ್ಶಿಗಳಾಗಿ ಪ್ರೇಮನಾಥ ಕೆ., ಭಾರತಿ ಪ್ರಶಾಂತ್ ಹಾಗೂ ಕೋಶಾಧಿಕಾರಿಯಾಗಿ ಶ್ರೀನಿವಾಸ ಭಂಡಾರಿ ಪುನರಾಯ್ಕೆಗೊಂಡರು. ಸಮ್ಮೇಳನದಲ್ಲಿ ಪ್ರಮುಖ 15 ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ಮುಂಬರುವ 25ನೇ ಜಿಲ್ಲಾ ಸಮ್ಮೇಳನಕ್ಕೆ ಸುಮಾರು 30 ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪಕ್ಷದ ತಾಲೂಕು ಸಮಿತಿ ಸದಸ್ಯೆ ಶಮಿತಾ ಸ್ವಾಗತಿಸಿದರು. ಪಕ್ಷದ ತಾಲೂಕು ಸಹ ಕಾರ‌್ಯದರ್ಶಿ ಪ್ರೇಮನಾಥ ಕೆ. ನಿರೂಪಿಸಿದರು. ಸಹ ಕಾರ‌್ಯದರ್ಶಿ ಭಾರತಿ ಪ್ರಶಾಂತ್ ವಂದಿಸಿದರು.